ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವ ತೋರಲು ಆರಂಭಿಸಿದೆ. ಆಗಸ್ಟ್ 24ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರದ ಎದುರು ಸ್ಪರ್ಧಿಸಲು ಹಲವು ಸಿನಿಮಾಗಳು ಹಿಂದೇಟು ಹಾಕುತ್ತಿದ್ದು, ಇದೀಗ ತೆಲುಗಿನ ಸ್ಟಾರ್ ನಟ ನಾನಿ ಅವರ ಬಹುನಿರೀಕ್ಷಿತ ‘ದಿ ಪ್ಯಾರಡೈಸ್’ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಬದಲಿಸಿಕೊಂಡಿದೆ.
ಈ ಹಿಂದೆ ಆಗಸ್ಟ್ 21ರಂದು ಬಿಡುಗಡೆಯಾಗಬೇಕಿದ್ದ ‘ದಿ ಪ್ಯಾರಡೈಸ್’, ಇದೀಗ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಅಂದರೆ, ‘ಟಾಕ್ಸಿಕ್’ ಬಿಡುಗಡೆಯಾದ ಸುಮಾರು ಒಂದು ತಿಂಗಳ ಬಳಿಕ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ.
‘ಟಾಕ್ಸಿಕ್’ ಕ್ರೇಜ್‌ಗೆ ಚಿತ್ರರಂಗದ ಲೆಕ್ಕಾಚಾರ!
ಚಿತ್ರರಂಗದ ವಲಯದಲ್ಲಿ ‘ಟಾಕ್ಸಿಕ್’ ಸಿನಿಮಾ ದೇಶಾದ್ಯಂತ ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ.
ಈ ಕಾರಣದಿಂದಲೇ ಅದೇ ಅವಧಿಯಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಮರುಪರಿಶೀಲಿಸುತ್ತಿವೆ ಎನ್ನಲಾಗುತ್ತಿದೆ.
ಎರಡನೇ ಬಾರಿ ಮುಂದೂಡಿದ ‘ದಿ ಪ್ಯಾರಡೈಸ್’
ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ಮೊದಲಿಗೆ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರೀಕರಣ ಪೂರ್ಣಗೊಳ್ಳದ ಕಾರಣ ಸಿನಿಮಾ ಮುಂದೂಡಲಾಗಿತ್ತು. ಬಳಿಕ ಆಗಸ್ಟ್ 21ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು.
ಈಗ ಮತ್ತೊಮ್ಮೆ ಬಿಡುಗಡೆ ದಿನಾಂಕ ಬದಲಾಗಿದ್ದು, ಸೆಪ್ಟೆಂಬರ್ 24ರಂದು ಸಿನಿಮಾ ತೆರೆಗೆ ಬರಲಿದೆ. ಭಿನ್ನ ಕಥಾಹಂದರ ಮತ್ತು ವಿಶಿಷ್ಟ ಮೇಕಿಂಗ್‌ನಿಂದ ಈ ಚಿತ್ರವೂ ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.
‘ಟಾಕ್ಸಿಕ್’ನಲ್ಲಿ ಭಾರೀ ತಾರಾಬಳಗ
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಯಶ್ ಕೂಡ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ದರ್ಬಾರ್?
ಬಿಡುಗಡೆಗೂ ಮುನ್ನವೇ ಇತರ ಸಿನಿಮಾಗಳು ತಮ್ಮ ರಿಲೀಸ್ ದಿನಾಂಕವನ್ನು ಬದಲಾಯಿಸಿಕೊಳ್ಳುತ್ತಿರುವುದು ‘ಟಾಕ್ಸಿಕ್’ ಚಿತ್ರದ ಮೇಲಿನ ವಿಶ್ವಾಸ ಮತ್ತು ನಿರೀಕ್ಷೆಯನ್ನು ಸ್ಪಷ್ಟಪಡಿಸುತ್ತಿದೆ. ಈಗ ಎಲ್ಲರ ಚಿತ್ತ ಆಗಸ್ಟ್ 24ರತ್ತ ನೆಟ್ಟಿದ್ದು, ಯಶ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿದ್ದಾರಾ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆ ಮಾಡಿದೆ.