ಹೂವಿನಹಡಗಲಿ : ಕಳೆದ ಹಲವು ವಾರಗಳಿಂದ ಕತ್ತೆಬೆನ್ನೂರು, ಮಕರಬ್ಬಿ ಹಾಗೂ ಕೋಟಿಹಾಳ ಗ್ರಾಮಗಳ ಜನರನ್ನು ಭೀತಿಗೆ ತಳ್ಳಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ನಾಲ್ಕು ವರ್ಷದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದ ಅರಣ್ಯ ಇಲಾಖೆ, ಬಳಿಕ ಅದನ್ನು ದರೋಜಿ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದೆ.
ಬೈಕ್ ಸವಾರರ ಮೇಲೂ ದಾಳಿ ಮಾಡಿತ್ತು
ಇತ್ತೀಚೆಗೆ ಕತ್ತೆಬೆನ್ನೂರು–ಮಕರಬ್ಬಿ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ದಾಳಿಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿತ್ತು.
ಜಾನುವಾರುಗಳೇ ಗುರಿ... ರೈತರಿಗೆ ಭಯದ ದಿನಗಳು
ಚಿರತೆ ಪದೇ ಪದೇ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಕುರಿ, ಮೇಕೆ ಹಾಗೂ ನಾಯಿಗಳನ್ನು ಹೊತ್ತೊಯ್ದು ಬೇಟೆಯಾಡುತ್ತಿತ್ತು. ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಒಂದಕ್ಕಿAತ ಹೆಚ್ಚು ಚಿರತೆಗಳು ಓಡಾಡುತ್ತಿರುವುದು ಕಂಡುಬAದಿತ್ತು. ಇದರಿಂದ ರೈತರು, ಕೂಲಿ ಕಾರ್ಮಿಕರು ಹೊಲಗಳಿಗೆ ತೆರಳಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ
ಕತ್ತೆಬೆನ್ನೂರು, ಮಕರಬ್ಬಿ ಹಾಗೂ ಕೋಟಿಹಾಳ ಗ್ರಾಮಸ್ಥರ ನಿರಂತರ ಮನವಿಯ ಮೇರೆಗೆ ಅರಣ್ಯ ಇಲಾಖೆ ಹುಣಸಿಕಟ್ಟಿ ಹಳ್ಳದ ಬಳಿ ಬೋನು ಅಳವಡಿಸಿತ್ತು. ಬುಧವಾರ ಸಂಜೆ ಚಿರತೆ ಅದರಲ್ಲಿ ಸಿಲುಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿ ಅದನ್ನು ಸೆರೆಹಿಡಿದರು.
ಸುರಕ್ಷಿತ ಅರಣ್ಯಕ್ಕೆ ಬಿಡುಗಡೆ
ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಬೋನಿಗೆ ಬಿದ್ದ ನಾಲ್ಕು ವರ್ಷದ ಗಂಡು ಚಿರತೆಯನ್ನು ದರೋಜಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
ಆದರೆ ಈ ಭಾಗದಲ್ಲಿ ಇನ್ನೂ ಹಲವು ಚಿರತೆಗಳು ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ನಿಗಾವಹಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.