ಹೊಸಪೇಟೆ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 4 ಟಿಎಂಸಿ ನೀರು ಜಲಾಶಯಕ್ಕೆ ಸೇರ್ಪಡೆಯಾಗಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾಗಿದೆ.
105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 44.190 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಸದ್ಯ 57,785 ಕ್ಯೂಸೆಕ್ ನೀರು ಒಳಹರಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸರಾಸರಿ 40,705 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 1633.00 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 1613.16 ಅಡಿಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದಲ್ಲಿ 80.003 ಟಿಎಂಸಿ ನೀರು ಸಂಗ್ರಹವಾಗಿತ್ತು.
ಮಾಲವಿ ಜಲಾಶಯಕ್ಕೂ ಹರಿದ ತುಂಗಭದ್ರೆ
ತುAಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯಕ್ಕೂ ನೀರು ಹರಿದು ಬಂದಿದೆ. ರಾಜವಾಳ ಜಾಕವಾಲ್ ಮೂಲಕ ತುಂಗಭದ್ರೆಯ ನೀರು ಮಾಲವಿ ಜಲಾಶಯವನ್ನು ತಲುಪಿದೆ.
ಗೇಟ್ ದುರಸ್ತಿ ಕಾಮಗಾರಿ ಪೂರ್ಣಗೊಂಡ ಬಳಿಕ ಮಾಲವಿ ಜಲಾಶಯಕ್ಕೆ ನೀರು ಹರಿಸಲಾಗುತ್ತಿದ್ದು, ಇದರಿಂದ ಜಲಾಶಯ ಭರ್ತಿಗೆ ವೇಗ ಸಿಕ್ಕಿದೆ. ಜಲಾಶಯದ ನೀರಿನ ಲಭ್ಯತೆ ಹೆಚ್ಚುತ್ತಿರುವುದರಿಂದ ರೈತರು ಹಾಗೂ ಸ್ಥಳೀಯರಲ್ಲಿ ಸಂತಸ ಮನೆಮಾಡಿದೆ.