ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಟಾಕ್ಸಿಕ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ. ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಈವೆಂಟ್ ಇದೀಗ ಸಿನಿ ವಲಯದ ಹಾಟ್ ಟಾಪಿಕ್ ಆಗಿದೆ.
ಚಿತ್ರ ಬಿಡುಗಡೆಯಾಗಲು ಕೇವಲ 11 ದಿನಗಳು ಬಾಕಿ ಇರುವಾಗ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವನ್ನು ಸಾಮಾನ್ಯ ಪ್ರಚಾರ ಸಮಾರಂಭವಾಗಿ ಅಲ್ಲ, ಜಾಗತಿಕ ಸಿನಿಮಾ ಸಂಭ್ರಮವಾಗಿ ರೂಪಿಸುವ ಉದ್ದೇಶ ಚಿತ್ರತಂಡದ್ದಾಗಿದೆ. ಭಾರತದ ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ವಿದೇಶಿ ಪತ್ರಕರ್ತರು ಮತ್ತು ಅಂತರರಾಷ್ಟ್ರೀಯ ಮನರಂಜನಾ ಮಾಧ್ಯಮಗಳ ಪ್ರತಿನಿಧಿಗಳು ಕೂಡ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ವೇದಿಕೆಯಾಗಲಿದೆ ಬೆಂಗಳೂರು
‘ಟಾಕ್ಸಿಕ್’ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ನಲ್ಲೂ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚಿತ್ರದ ಪ್ರಚಾರಕ್ಕೂ ಅಂತರರಾಷ್ಟ್ರೀಯ ಸ್ಪರ್ಶ ನೀಡಲಾಗುತ್ತಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳ ಪ್ರಚಾರಕ್ಕಾಗಿ ಮುಂಬೈ, ಹೈದರಾಬಾದ್ ಅಥವಾ ವಿದೇಶಗಳತ್ತ ಮುಖ ಮಾಡುವ ಸಂಪ್ರದಾಯವಿದ್ದರೂ, ಈ ಬಾರಿ ಬೆಂಗಳೂರುವೇ ಕೇಂದ್ರಬಿಂದುವಾಗುತ್ತಿದೆ.
ಮಾತು ಕೊಟ್ಟ ಯಶ್... ಈಗ ಅದನ್ನೇ ಸಾಕಾರಗೊಳಿಸುತ್ತಿದ್ದಾರೆ!
"ನಾನು ಬೇರೆ ಭಾಷೆಗಳಿಗೆ ಹೋಗಲ್ಲ... ಅವರನ್ನೇ ಇಲ್ಲಿಗೆ ಕರೆಸುತ್ತೇನೆ. ಎಲ್ಲರೂ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡುತ್ತೇನೆ" ಎಂದು ಈ ಹಿಂದೆ ಹೇಳಿದ್ದ ಯಶ್ ಅವರ ಮಾತುಗಳು ಈಗ ನಿಜವಾಗುತ್ತಿರುವಂತಿದೆ.
ಜಾಗತಿಕ ಮಾಧ್ಯಮಗಳನ್ನು ಬೆಂಗಳೂರಿಗೆ ಕರೆಸಿ ಸಿನಿಮಾ ಅನಾವರಣಗೊಳಿಸುವ ಮೂಲಕ, ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸುವ ಪ್ರಯತ್ನಕ್ಕೆ ಯಶ್ ಕೈ ಹಾಕಿದ್ದಾರೆ ಎಂಬ ಅಭಿಪ್ರಾಯ ಸಿನಿ ವಲಯದಲ್ಲಿ ಕೇಳಿಬರುತ್ತಿದೆ.
'ಕೆಜಿಎಫ್' ಬಳಿಕ ಮತ್ತೊಂದು ಜಾಗತಿಕ ನಿರೀಕ್ಷೆ
‘ಕೆಜಿಎಫ್’ ಸರಣಿಯ ಅಭೂತಪೂರ್ವ ಯಶಸ್ಸಿನ ಬಳಿಕ ಯಶ್ ಅಭಿನಯಿಸುತ್ತಿರುವ ಮೊದಲ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ ಎನ್ನಲಾಗಿದ್ದು, ಡ್ರಗ್ ಮಾಫಿಯಾ ಮತ್ತು ಹೈ-ಆಕ್ಟೇನ್ ಆಕ್ಷನ್ ಕಥಾಹಂದರ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಆಗಸ್ಟ್ 15ರಂದು ನಡೆಯಲಿರುವ ಮೆಗಾ ಈವೆಂಟ್ ಚಿತ್ರದ ಜಾಗತಿಕ ಪ್ರಚಾರಕ್ಕೆ ಹೊಸ ವೇಗ ನೀಡುವ ನಿರೀಕ್ಷೆಯಿದ್ದು, ಆಗಸ್ಟ್ 26ರಂದು ‘ಟಾಕ್ಸಿಕ್’ ವಿಶ್ವದಾದ್ಯಂತ ತೆರೆಗೆ ಬರಲಿದೆ.
