ಬಳ್ಳಾರಿ: ದಸರಾ ಶರನ್ನವರಾತ್ರಿಯ ವಿಜಯದಶಮಿ ಹಬ್ಬದ ಪ್ರಯುಕ್ತ ಬಳ್ಳಾರಿಯಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಇಂದು ಆಕರ್ಷಕ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು. ನೂರಾರು ಜನ ಗಣ ವೇಷಧಾರಿಗಳು, ನಗರದ ಪ್ರಮುಖ ರಸ್ತೆಗಳಲ್ಲಿ, ಸರ್ಕಲ್‍ಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡು ಶಿಸ್ತಿನಿಂದ ಹೆಜ್ಜೆ ಹಾಕುತ್ತಾ, ಸಾರ್ವಜನಿಕರ ಗಮನ ಸೆಳೆದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಳೆಯ ಬಳಿಯಿಂದ ಪ್ರಾರಂಭವಾದ ಆರ್‍ಎಸ್‍ಎಸ್ ಕಾರ್ಯಕರ್ತ ಗಣ ವೇಷಧಾರಿಗಳ ಆಕರ್ಷಕ ಮೆರವಣಿಗೆಯು, ಪ್ರಭಾತ್ ಟಾಕೀಸ್ ಹತ್ತಿರದಲ್ಲಿನ ತೇರು ಬೀದಿಯಲ್ಲಿರುವ ಶ್ರೀ ಕೊಟ್ಟೂರು ಸ್ವಾಮಿ ಮಠದವರೆಗೆ ಮೆರವಣಿಗೆ ಸಾಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಅನೇಕರೂ ಸೇರಿದಂತೆ ನೂರಾರು ಜನ ಗಣ ವೇಷದಾರಿ ಸ್ವಯಂ ಸೇವಕರು ಶಿಸ್ತು ಬದ್ಧ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯ ಉದ್ದಕ್ಕೂ ಸಾಗುತ್ತಿದ್ದುದು ಗೋಚರಿಸಿತು. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಿಂದ ಆರಂಭವಾದ ಪಥ ಸಂಚಲನವು ಶ್ರೀ ದುರ್ಗಮ್ಮ ಗುಡಿ ರಸ್ತೆ, ಗಡಿಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ ಸರ್ಕಲ್ ಮೂಲಕ ತೇರು ಬಜಾರ್‍ನಲ್ಲಿ ಸಾಗಿ ಶ್ರೀ ಕೊಟ್ಟೂರುಸ್ವಾಮಿ ಮಠವನ್ನು ತಲುಪಿತು. ರಾಷ್ಟ್ರ ನಿರ್ಮಾಣದ ಸಂಕಲ್ಪ:- ವಿಜಯದಶಮಿ (ದಸರಾ) ಹಬ್ಬದ ಸಂದರ್ಭದಲ್ಲಿ ಆರ್‍ಎಸ್‍ಎಸ್ ವತಿಯಿಂದ ಪ್ರತಿ ವರ್ಷವೂ ಆಕರ್ಷಕ ಪಥ ಸಂಚಲನ ಹಮ್ಮಿಕೊಳ್ಳಲಾಗುತ್ತದೆ. ಸಂಘದ ಸಂಸ್ಥಾಪನಾ ದಿನದ ಮಹತ್ವದ ಹಿನ್ನೆಲೆಯಲ್ಲಿ ರಾಷ್ಟ್ರ ನಿರ್ಮಾಣ ಸಂಕಲ್ಪದೊಂದಿಗೆ ನಡೆಸಲಾದ ಈ ಪಥ ಸಂಚಲನದಲ್ಲಿ ಸ್ವಯಂ ಸೇವಕರು ಗಣ ವೇಷ ಧರಿಸಿ, ಶ್ರದ್ಧೆ, ಶಿಸ್ತಿನಿಂದ ಹೆಜ್ಜೆ ಹಾಕುತ್ತಾರೆ. ದೇಶಭಕ್ತಿ, ರಾಷ್ಟ್ರೀಯ ಐಕ್ಯತೆ ಹಾಗೂ ಸಮಾಜ ಸೇವೆಯ ಸದಾಶಯಗಳೊಂದಿಗೆ, ಭವ್ಯ ಭಾರತ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪವನ್ನು, ಪಥ ಸಂಚಲನದ ಮೂಲಕ ಸಾರಲಾಯಿತು ಎಂದು ತಿಳಿಸಲಾಗಿದೆ.