ಬೆಂಗಳೂರು: ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು 600 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಡೀಲ್ ಕೊಟ್ಟಿರುವ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ನಗರದ ಮಲ್ಲೇಶ್ವರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ಮೊತ್ತದ ಡೀಲ್ ಕೊಟ್ಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅದು ಬೇರೆ ಯಾರೂ ಅಲ್ಲ. ಈಗಿನ ಮಹಾನ್ ಮುಖ್ಯಮಂತ್ರಿಗಳೇ ಒಂದು ಕುಟುಂಬವನ್ನು ಮುಗಿಸಲು ಹೇಳಿರುವುದು. ಅದು ದೇವೇಗೌಡರ ಕುಟುಂಬವೇ ಆಗಿದೆ. ನಮ್ಮ ಕುಟುಂಬವನ್ನು ಮುಗಿಸಲು ಈ ಮುಖ್ಯಮಂತ್ರಿ ನಡೆಸಿರುವ ಕುತಂತ್ರ ಒಂದೆರಡಲ್ಲ. ಅನೇಕ ಕುತಂತ್ರಗಳನ್ನು ಅವರು ಮಾಡಿದ್ದು, ಅದರಲ್ಲಿ 600 ಕೋಟಿ ರೂಪಾಯಿ ಸುಪಾರಿ ಡೀಲ್ ಕೂಡ ಒಂದು. ಅವರು ಈ ಕೃತ್ಯ ಎಸಗಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಸಂಶಯವೇ ಇಲ್ಲ ಎಂದಿದ್ದಾರೆ. ಆದ್ದರಿಂದಲೇ ಇದೆಲ್ಲವನ್ನು ತನಿಖೆ ಮಾಡಬೇಕು ಎಂದು ನಾನು ಹೇಳಿದ್ದು. ಸ್ಟಿಂಗ್ ಮಾಡಿದ ಪಾತಕಿಗಳನ್ನು ಬಂಧಿಸಿ ಎಂದರೆ ಅವರಿಗೆ ಸುರಕ್ಷಿತವಾಗಿ ನಿರೀಕ್ಷಣಾ ಜಾಮೀನು ಸಿಗುವಂತೆ ಮಾಡಿ, ಅದಕ್ಕೆ ಸಂಬAಧ ಇಲ್ಲದವರನ್ನು ಕಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ ಎಂದು ಹೆಚ್ ಡಿಕೆ ಹೇಳಿದರು. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ನಡುವೆ ಒಂದು ಸೂಕ್ಷ್ಮ ವಿಚಾರದ ತನಿಖೆ ನಡೆಯುತ್ತಿದೆ. ಇನ್ನೂ ಐದು ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತಾರೋ ನೋಡೋಣ. ನಮ್ಮ ಯುವಕರು ಭಯಪಡುವುದು ಬೇಡ. ಅವರಿಗೆ ನಾನು ಹೇಳುವುದು ಇಷ್ಟೇ, ಪೊಲೀಸರ ತನಿಖೆಗೆ ಸಹಕರಿಸಿ. ಅವರು ಕರೆದಾಗ ಹೋಗಿ. ಕೇಳಿದ ಉಪಕರಣಗಳನ್ನು ಕೊಡಿ. ಆಗ ಇವರ ತನಿಖೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ತಿಳಿಯುತ್ತದೆ. ನನಗೂ ಒಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಕೂಡ ಗಮನಿಸಿದ್ದೇನೆ ಎಂದರು. ಈ ತನಿಖೆಯ ಬಗ್ಗೆ ಸಿದ್ದರಾಮಯ್ಯ ಅವರಿಗೂ ಅನುಮಾನ ಇದೆ. ಒಬ್ಬ ವ್ಯಕ್ತಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಅಸಲಿ ಅಪರಾಧಿಗಳನ್ನು ಹಿಡಿಯಬೇಕಲ್ಲವೇ? ಮೂಲವನ್ನು ಹುಡುಕುವುದು ಬಿಟ್ಟು ಇವರು ಬಾಲವನ್ನು ಬಡಿಯುತ್ತಾ ಕೂತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಿಸಿದರು.ವಿಕ್ಕಿ ಸಾವು ಮುಚ್ಚಿ ಹಾಕಲು ಸರ್ಕಾರ, ಪೊಲೀಸರು ಶಾಮೀಲು: ವಿಕಾಸ್ (ವಿಕ್ಕಿ) ಅನುಮಾನಾಸ್ಪದ ಸಾವಿನ ಬಗ್ಗೆ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸ್ಟಿಂಗ್ ಮಾಡಿದ ಆ ವ್ಯಕ್ತಿಯ ಸಂಸ್ಥೆಯಲ್ಲಿ ಆಗಿರುವ ಘಟನೆ ಬಗ್ಗೆ ಗೃಹ ಸಚಿವರು ದಾಖಲೆ ಕೇಳುತ್ತಾರೆ. ಲಿಫ್ಟ್ ಬಿದ್ದು ಈ ಸಾವು ಆಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಸರಿಯಾದ ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವುದರಲ್ಲಿ ಸರ್ಕಾರ ಸೇರಿ ಪೊಲೀಸರು ಕೂಡ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದರು. ಸ್ಟಿಂಗ್ ಆಪರೇಷನ್ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯಲ್ಲಿ ಅನೇಕ ಅಕ್ರಮಗಳು, ಅಪರಾಧಗಳು ನಡೆದಿವೆ. ಎಷ್ಟೋ ಕೊಲೆಗಳು ಕೂಡ ಆಗಿವೆ. ಕೋಲಾರ ಬಳಿ ಒಬ್ಬ ಡ್ರೈವರ್ ಕೊಲೆ ಆಗಿದೆ. ಆ ಪ್ರಕರಣದ ಮಾಹಿತಿ ನನಗೆ ಬರುತ್ತಿವೆ. ಅಂತಹ ಕೊಲೆಗಡುಕರನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟು ನಮ್ಮ ಹುಡುಗರ ಬೆನ್ನು ಬಿದ್ದಿದ್ದಾರೆ. ಅವರನ್ನು ತನಿಖೆ ಮಾಡಿ, ನಮ್ಮ ಹುಡುಗರನ್ನು ಕೂಡ ತನಿಖೆ ಮಾಡಿ. ಏನಿದೆಯೋ ಎಲ್ಲಾ ಹೊರಗೆ ಬರಲಿ. ನಾನೇ ಸ್ಟಿಂಗ್ ಮಾಡಿದ್ದು, ಏನೀಗ? ನಾನು ಕಿಂಗ್ ಆಫ್ ಸ್ಟಿಂಗ್! ಎಂದು ಕೊಚ್ಚಿಕೊಂಡ ಕಿಡಿಗೇಡಿಯನ್ನು ಹಾಗೆಯೇ ಬಿಟ್ಟಿದ್ದೀರಿ, ಯಾಕೆ? ಎಂದು ಹೆಚ್ ಡಿಕೆ ಪ್ರಶ್ನಿಸಿದರು. ಯತೀಂದ್ರ ಅವರು ಏನು ಹೇಳಿದ್ದಾರೆ ಎಂಬುದನ್ನು ಗೃಹ ಮಂತ್ರಿ ಕೇಳಿಲ್ಲವೇ? ಸಿದ್ದರಾಮಯ್ಯ ಅವರು ಹೇಳಿದ್ದನ್ನು ಕೂಡ ಅವರು ಕೇಳಿರಬೇಕಲ್ಲವೇ? ಕಾಂಗ್ರೆಸ್ ಪಕ್ಷದ ನಾಯಕಿ ಒಬ್ಬರು ಸ್ಟಿಂಗ್ ನಲ್ಲಿ ಇದ್ದಾರೆ ಎಂದು ಅವರು ಹೇಳಿಲ್ಲವೇ? ಇಷ್ಟೆಲ್ಲಾ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ನೋಡಿರುವುದಿಲ್ಲವೇ? ಹಾಗಾದರೆ ಅವರು ಯಾರನ್ನು, ಯಾರ ಒತ್ತಡ, ಆದೇಶದ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ? ಎಂಬುದನ್ನು ಹೇಳಬೇಕಲ್ಲವೇ? ಎಂದು ವಾಗ್ದಾಳಿ ನಡೆಸಿದರು. ಈಗ ಒಬ್ಬರು ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ಸಿಗದ ರೀತಿಯಲ್ಲಿ ಪೊಲೀಸ್ ಇಲಾಖೆ ಏನಾದರೂ ಪ್ರಯತ್ನ ಪಟ್ಟಿದ್ದಾರಾ? ನಾನು ಯಾರನ್ನೂ ಹೆದರಿಸಲು ಈ ಮಾತನ್ನು ಹೇಳುತ್ತಿಲ್ಲ. ಪ್ರಾಮಾಣಿಕವಾಗಿ ತನಿಖೆ ಮಾಡಿ ಎಂದಷ್ಟೇ ಹೇಳುತ್ತಿದ್ದೇನೆ. ನಾನು ಮುಂದಿನ ಐದು ದಿನಗಳ ಕಾಲ ನವದೆಹಲಿಗೆ ತೆರಳುತ್ತಿದ್ದೇನೆ. ಈ ಸರ್ಕಾರಕ್ಕೆ ಐದು ದಿನ ಸಮಯ ಕೊಡುತ್ತೇನೆ. ನೋಡೋಣ ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು ಅಂತ ನಾನು ಹೇಳಿದ್ದಲ್ಲ. ಅವರು ಹಿರಿಯರಿದ್ದಾರೆ. ಅಗತ್ಯಬಿದ್ದರೆ ಭೇಟಿ ಮಾಡುತ್ತೇನೆ. ಅವರನ್ನು ಕಾಂಗ್ರೆಸ್ ನವರೇ ಸೇರಿಕೊಂಡು ಮುಗಿಸಲು ಹೊರಟಿದ್ದಾರೆ. ಅದೆಲ್ಲ ತನಿಖೆ ಆಗಲಿ. ನಮ್ಮ ಕಾರ್ಯಕರ್ತರು ಕೈಗೆ ಸಿಗದಂತೆ ತಪ್ಪಿಸಿಕೊಂಡಿದ್ದಾರೆ ಎಂದು ಮೀಡಿಯಾದಲ್ಲಿ ವರದಿಯಾಗಿದೆ. ಯಾರೂ ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಬಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಮ್ಮ ವಾರ್ ರೂಂನಲ್ಲಿ ಕೆಲಸ ಮಾಡುವ ಹುಡುಗರಿಗೆ ಹೇಳಿದ್ದೇನೆ. ಯಾರೂ ಕೂಡ ಹೆದರುವ ಅಗತ್ಯ ಇಲ್ಲ ಎಂದು ಹೆಚ್ ಡಿಕೆ ಅಭಯ ನೀಡಿದರು.