ಬೆಂಗಳೂರು : ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಲಾಗಿದೆ. ಶನಿವಾರದಿಂದ (ಮಾರ್ಚ್ 7) 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 60 ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಬೆಲೆ 853ರಿಂದ 913ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 852.50ರಿಂದ 912.50ಕ್ಕೆ, ಕೊಲ್ಕತ್ತಾದಲ್ಲಿ 879ರಿಂದ 930ಕ್ಕೆ ಹಾಗೂ ಚೆನ್ನೈಯಲ್ಲಿ 868.50ರಿಂದ 928.50ಕ್ಕೆ ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ ಸಬ್ಸಿಡಿ ಇಲ್ಲದ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 855.50 ಆಗಿದೆ. ಇದೇ ವೇಳೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ 115 ಹೆಚ್ಚಳಗೊಂಡಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪರಿಣಾಮ ಬೀಳಲಿದೆ.
ಇಂಧನ ಸರಬರಾಜು ಕುರಿತ ಆತಂಕಗಳ ನಡುವೆಯೇ ಬೆಲೆ ಏರಿಕೆ ನಡೆದಿದೆ. ಆದರೆ ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್‌ಪುರಿ ಭರವಸೆ ನೀಡಿದ್ದಾರೆ.
ಅದೇ ವೇಳೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂಬ ಸಾಮಾಜಿಕ ಜಾಲತಾಣಗಳ ವರದಿಗಳನ್ನು ತಳ್ಳಿಹಾಕಿದ್ದು, ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ತಿಳಿಸಿದೆ.
ಸರ್ಕಾರದ ಮೂಲಗಳ ಪ್ರಕಾರ, ಹಾರ್ಮುಜ್ ಸಮುದ್ರಸಂಧಿ ಮೂಲಕ ಸರಬರಾಜು ವ್ಯತ್ಯಯದ ಆತಂಕ ಇದ್ದರೂ ಭಾರತ ವಿವಿಧ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಇಂಧನ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ. ರಷ್ಯಾದಿಂದಲೂ ಕಚ್ಚಾ ತೈಲ ಆಮದು ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.