ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ ವಿಡಿಯೋ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿ ಬಿಡುಗಡೆ ಮಾಡಿದ ವಿಡಿಯೋ ಸಂದೇಶ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ, ‘ನಿಂದನೆಯಿಂದ ಏನೂ ಪರಿಹಾರವಾಗುವುದಿಲ್ಲ; ಅವರನ್ನು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ಮೋದಿ ಹೇಳಿದ್ದಾರೆ.
‘ಅಸಹ್ಯಕರ ದೃಶ್ಯ... ಆದರೂ ಕ್ಷಮಿಸಲು ಬಯಸುತ್ತೇನೆ’
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದರು.
“ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು. ನನ್ನ ಸ್ವರ್ಗಸ್ಥ ತಾಯಿಯನ್ನೂ ಅವಹೇಳನ ಮಾಡಲಾಯಿತು. ಅದು ಯಾವುದೇ ಸುಸಂಸ್ಕೃತ ಸಮಾಜ ಒಪ್ಪಿಕೊಳ್ಳದ ಘಟನೆ. ಆದರೂ ಬಾಲ್ಯದಲ್ಲಿ ತಪ್ಪುಗಳು ಆಗುವುದು ಸಹಜ. ಆ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು” ಎಂದು ಹೇಳಿದರು.
‘ಹಲ್ಲು-ನಾಲಿಗೆಯ ಸಂಬಂಧದಂತೆ ಈ ಮಕ್ಕಳೂ ನಮ್ಮವರೇ’
ಯುವಕರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಮಾರ್ಗದರ್ಶನವೇ ಮುಖ್ಯ ಎಂದು ಒತ್ತಿ ಹೇಳಿದ ಮೋದಿ, ಒಂದು ಸರಳ ಉದಾಹರಣೆಯ ಮೂಲಕ ತಮ್ಮ ಮಾತು ವಿವರಿಸಿದರು.
“ಕೆಲವೊಮ್ಮೆ ನಾಲಿಗೆ ಹಲ್ಲಿಗೆ ಸಿಕ್ಕಿ ರಕ್ತ ಬರುತ್ತದೆ. ಹಾಗೆಂದು ನಾವು ಹಲ್ಲುಗಳನ್ನು ಮುರಿದುಕೊಳ್ಳುವುದಿಲ್ಲ. ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಹಾಗೆಯೇ ಈ ಮಕ್ಕಳೂ ನಮ್ಮವರೇ. ಅವರಿಗೆ ಸರಿಯಾದ ದಾರಿ ತೋರಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಅಲ್ಲದೆ, “ದೇಶ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಯುವಕರು ಕೂಡ ತಮ್ಮ ಕನಸುಗಳನ್ನು ಬೆನ್ನಟ್ಟಿ ದೇಶದ ಪ್ರಗತಿಯಲ್ಲಿ ಪಾಲುದಾರರಾಗಬೇಕು. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಾನು ಬದುಕುತ್ತಿದ್ದೇನೆ” ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.
ಎಫ್‌ಐಆರ್ ಬೆನ್ನಲ್ಲೇ ಸಂದೇಶ
ಈ ವಿಡಿಯೋ ಹೊರಬಿದ್ದಿರುವುದು ನೋಯ್ಡಾ ಮೂಲದ 25 ವರ್ಷದ ರುಚಿಕಾ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬೆಳವಣಿಗೆಯ ನಂತರವಾಗಿದೆ.
ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ, ಘಾಜಿಯಾಬಾದ್ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ನಂತರದ ತನಿಖೆಗಾಗಿ ಪ್ರಕರಣವನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ರಾಜಕೀಯ ವಲಯದಲ್ಲಿ ಹೊಸ ಚರ್ಚೆ
ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಗಳು ಕೇಳಿಬರುತ್ತಿರುವಾಗ, ಮತ್ತೊಂದೆಡೆ ಪ್ರಧಾನಿ ಮೋದಿ ‘ಕ್ಷಮೆ, ಮಾರ್ಗದರ್ಶನ ಮತ್ತು ಪರಿವರ್ತನೆ’ ಎಂಬ ಸಂದೇಶ ನೀಡಿರುವುದು ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯುವಜನರೊಂದಿಗೆ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ.