ಬೆಂಗಳೂರು: ಪ್ರಧಾನಿ Narendra Modi ಅವರು ದೇಶದ ಹಿತದೃಷ್ಟಿಯಿಂದ ಚಿನ್ನ ಹಾಗೂ ಇಂಧನ ಬಳಕೆಯನ್ನು ನಿಯಂತ್ರಿಸುವಂತೆ ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಟೀಕೆ ವ್ಯಕ್ತಪಡಿಸಿರುವುದಕ್ಕೆ ಬಿಜೆಪಿ ನಾಯಕ R. Ashoka ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್, “ಕಾಂಗ್ರೆಸ್ ನಾಯಕರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?” ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರ ಪ್ರತಿಯೊಂದು ನಡೆಗೂ ವಿರೋಧ ವ್ಯಕ್ತಪಡಿಸುವುದೇ ಇಂದಿನ ಕಾಂಗ್ರೆಸ್ ನಾಯಕರ “ನಿತ್ಯ ಕಾಯಕ”ವಾಗಿದೆ ಎಂದು ಟೀಕಿಸಿರುವ ಅವರು, ರಾಷ್ಟ್ರದ ಆರ್ಥಿಕ ಹಿತದೃಷ್ಟಿಯಿಂದ ನೀಡಲಾಗುವ ಸಲಹೆಗಳನ್ನು ಲೇವಡಿ ಮಾಡುವ ಮುನ್ನ ಕಾಂಗ್ರೆಸ್ ತನ್ನದೇ ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
1967ರಲ್ಲಿ ಮಾಜಿ ಪ್ರಧಾನಿ Indira Gandhi ದೇಶದ ಆರ್ಥಿಕ ಶಿಸ್ತಿಗಾಗಿ “ಚಿನ್ನ ಖರೀದಿಸಬೇಡಿ” ಎಂದು ಜನರಿಗೆ ಮನವಿ ಮಾಡಿದ್ದರು. ಅದೇ ರೀತಿ 2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿನ ಹಣಕಾಸು ಸಚಿವ P. Chidambaram ಚಾಲ್ತಿ ಖಾತೆ ಕೊರತೆಯನ್ನು ನಿಯಂತ್ರಿಸಲು “ಚಿನ್ನದ ಮೇಲಿನ ವ್ಯಾಮೋಹ ಬಿಡಿ” ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದರು ಎಂಬುದನ್ನು ಅಶೋಕ್ ನೆನಪಿಸಿದ್ದಾರೆ.
“ಇಂದಿರಾ ಗಾಂಧಿ ಅಥವಾ ಕಾಂಗ್ರೆಸ್ ಸರ್ಕಾರಗಳು ಇದೇ ರೀತಿಯ ಕರೆ ನೀಡಿದಾಗ ಅದು ಆರ್ಥಿಕ ನೀತಿಯಾಗಿತ್ತು. ಆದರೆ ಮೋದಿ ಅವರು ರಾಷ್ಟ್ರದ ಹಿತಕ್ಕಾಗಿ ಕರೆ ನೀಡಿದರೆ ಅದನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ಕಾಂಗ್ರೆಸ್ ನಾಯಕರ ದ್ವಂದ್ವ ನಿಲುವಿಗೆ ಸ್ಪಷ್ಟ ಉದಾಹರಣೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಕುರಿತು ತರ್ಕವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲಿ. ಮೋದಿ ವಿರೋಧದ ಭರದಲ್ಲಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡಬೇಡಿ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.