ಬೆಂಗಳೂರು: ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನು ಸುರಕ್ಷಿತವಾಗಿರಿಸಲು ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಕಾಂಗ್ರೆಸ್‌ನ ಸುಮಾರು 14 ಮಂದಿ ಶಾಸಕರು ಹಾಗೂ ನಾಯಕರು ಬೆಂಗಳೂರಿಗೆ ಆಗಮಿಸಿ ರಾಮನಗರ ಜಿಲ್ಲೆಯ ಬಿಡದಿಯ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
ಗುರುವಾರ ರಾತ್ರಿ ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಶಾಸಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಂದ ಶಾಸಕರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಹಾಗೂ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ.
ಈ ತಂಡದಲ್ಲಿ ಶಾಸಕರಾದ ಮಂಗು ಖಿಲಾ, ಅಪ್ಪಲ ಸ್ವಾಮಿ, ರಾಜನ್ ಎಕ್ಕಾ, ಅಶೋಕ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಜೊತೆಗೆ ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು ಸುಮಾರು 14 ಮಂದಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಡಿಶಾ ಕಾಂಗ್ರೆಸ್‌ನ ವೀಕ್ಷಕರಾಗಿರುವ ಹಿನ್ನೆಲೆಯಲ್ಲಿ ಶಾಸಕರು ಬೆಂಗಳೂರಿಗೆ ಆಗಮಿಸಿದ್ದು, ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ. ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಈ ತಂತ್ರ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.