ಬಳ್ಳಾರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಸೇರಿದಂತೆ ಕಾಂಗ್ರೆಸ್‍ನವರು ‘ಟೂಲ್‍ಕಿಟ್’ ಆಗಿ ಬಳಸುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ಧುರೀಣ, ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಳೆದ ಅನೇಕ ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟು ಹತಾಶರಾಗಿರುವ ಕಾಂಗ್ರೆಸ್ ಮುಖಂಡರು, ‘ಎಸ್‍ಐಆರ್’ ಅನ್ನು ಅಸ್ತ್ರವಾಗಿ ಬಳಸಿ ಪುಟಿದೇಳುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದರು.
ಇವಿಎಂ ವಿಚಾರ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಗೊಂದಲ ಹುಟ್ಟಿಹಾಕಿದ ಕಾಂಗ್ರೆಸ್ ನಾಯಕರು, ಇದೀಗ ‘ಎಸ್‍ಐಆರ್’ ವಿಚಾರದಲ್ಲಿಯೂ ಗೊಂದಲ ಮೂಡಿಸುತ್ತಿದ್ದಾರೆ.ಫಾರಂ-7 ಅರ್ಜಿ ಸಲ್ಲಿಸಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ.ಅದರಂತೆ ಬಿಜೆಪಿಯವರು ಅರ್ಜಿ ಸಲ್ಲಿಸಿದ್ದಾರೆ.ಯಾವುದೇ ಮತದಾರರ ಹೆಸರುಗಳನ್ನು ಅಳಿಸಿ ಹಾಕುವಂತೆ ಹೇಳಿಲ್ಲ, ನಿಯಮಗಳಿಗೆ ಅನುಗುಣವಾಗಿಯೇ ಮರು ಪರಿಶೀಲನೆ ನಡೆಸಲಿ ಎಂದು ಹೇಳುವುದೂ ತಪ್ಪೇ? ಎಂದು ಪ್ರಶ್ನಿಸಿದರು.
ರಾಜ್ಯದಾದ್ಯಂತ ಗಾಂಜಾ,ಡ್ರಗ್ಸ್ ಮಾರಾಟ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಬಂಧಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಆದರೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಪೊಲೀಸರ ಮೂಲಕ ಬಿಜೆಪಿ ಮುಖಂಡರ ಮೇಲೆ ಕೇಸ್ ಹಾಕಿಸುವುದು, ಹಲ್ಲೆ ನಡೆಸುವ, ಬಂಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ದೇಶದ ಕಾನೂನಿನ ಮೇಲೆ ಬಿಜೆಪಿಯವರಿಗೆ ಅಪಾರವಾದ ಗೌರವವಿದೆ. ಆದರೆ, ಕಾಂಗ್ರೆಸ್‍ನವರಿಗೆ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ಮುಖಂಡರಾದ, ಬಿಎಲ್‍ಏ-1 ಆಗಿರುವ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ವಿರುದ್ಧ ಪೊಲೀಸರು ಎಸ್‍ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಿರುವುದು ಸರಿಯಲ್ಲ. ಇದನ್ನು ಖಂಡಿಸಿ ಬಿಜೆಪಿಯವರು ಶಾಂತಿಯುತ ಪ್ರತಿಭಟನೆ ನಡೆಸಿದಾಗ ಪೊಲೀಸರು ಕಾರ್ಯಕರ್ತರನ್ನು ದರ-ದರನೇ ಎಳೆದಾಡಿ, ತಳ್ಳಾಡಿ ಗಾಯಗೊಳಿಸಿರುವುದು, ಬಂಧಿಸಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ನಗರ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ, ಬಿಜೆಪಿ ಅಧ್ಯಕ್ಷ ಅನಿಲ್‍ನಾಯ್ಡು ಮತ್ತಿತರೆ ಪ್ರಮುಖರು ಉಪಸ್ಥಿತರಿದ್ದರು.