ನಾಳೆ ಕುರುಗೋಡು ಶ್ರೀ ದೊಡ್ಡಬಸವೇಶ್ವರ ರಥೋತ್ಸವ


ಕುರುಗೋಡು.ಮಾ.17 : ಹಂಪಿ ವಿರೂಪಾಕ್ಷ ದೇವರಿಗೆ ಎದುರು ಬಸವಣ್ಣ ಎಂದೇ ಪ್ರತೀತಿ ಇರುವ ಕುರುಗೋಡು ಶ್ರೀ ದೊಡ್ಡಬಸವೇಶ್ವರ ಜಾತ್ರೆ ಇಂದು ಸಂಜೆ ಅತ್ಯಂತ ವಿಜೃಂಭಣೆಯಿoದ ನಡೆಯಲಿದೆ. ಈ ಭಾಗದ ಏಕ ಶಿಲಯ ಬೃಹತ್ ನಂದಿ ವಿಗ್ರಹ ಇದಾಗಿದ್ದು, ಆಕಾರಕ್ಕೆ ತಕ್ಕಂತೆ ಉದ್ದವಾದ ಕೋಡುಗಳಿಲ್ಲದೆ ಕಿರಿದಾದ ಕೋಡುಗಳಿರುವುದರಿಂದ ಈ ಊರಿಗೆ ಆಡುಮಾತಿನಲ್ಲಿ ಕುರುಗೋಡು ಆಯಿತೆಂದು ಹಿರಿಯರು ಹೇಳುತ್ತಾರೆ. ಪ್ರತಿ ವರ್ಷ ಮಾರ್ಚ್ ತಿಂಗಳ ಬಿರು ಬಿಸಿಲಿನಲ್ಲಿ ಬರುವ ಶ್ರೀ ದೊಡ್ಡಬಸವೇಶ್ವರ ಜಾತ್ರೆ ಸರಿಯಾಗಿ ಹೋಳಿ ಹುಣ್ಣಿಮೆಯ ದಿನ ಬರುತ್ತದೆ. ನಾಡಿನಾದ್ಯಂತ ಜನತೆ ಹೋಳಿ ಹಬ್ಬದಲ್ಲಿ ತಲ್ಲೀನರಾಗಿರುವಾಗ ಇಲ್ಲಿ ಭಕ್ತಿಯಿಂದ ಜಾತ್ರೆ ನಡೆಯುವುದು ವಿಶೇಷ. ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಯಾದ ಕುರುಗೋಡಿನ ಆದಿದೈವ ಶ್ರೀ ದೊಡ್ಡಬಸವೇಶ್ವರ ಜಾತ್ರೆಗೆ ಹಿರಿಕಿರಿಯರೆನ್ನದೆ ಎಲ್ಲರೂ ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸುತ್ತಾರೆ. ಸುತ್ತ ಮುತ್ತಲಿನ ಊರಿನ ಜನರು ಬಂಡಿ, ಟ್ರಾಕ್ಟರ್‌ಗಳಲ್ಲದೆ ದ್ವಿಚಕ್ರ ವಾಹನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ವರ್ಷ ಮಾರ್ಚ್ 18 ರಂದು ರಥೋತ್ಸವ ಇರುವುದರಿಂದ ಶಿವರಾತ್ರಿಯಿಂದಲೇ ರಥ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ದೇವಸ್ಥಾನದ ಮತ್ತು ರಥದ ನಿರ್ಮಾಣದ ಕಾರ್ಯಕ್ರಮಗಳಲ್ಲಿ ಪ್ರತಿಯೊಂದು ಜನಾಂಗದವರು ತಮ್ಮದೇ ಆದ ಸೇವೆಸಲ್ಲಿಸುತ್ತಾ ಬಂದಿರುವುದು ಪಾರಂಪರಗತ ರೂಡಿಯಾಗಿದೆ. ಇಂತಹ ಜಾತ್ರೆಗಳಿಂದ ಇಂದಿಗೂ ಇಲ್ಲಿ ಜನಪದ ಸಂಪ್ರದಾಯ ಉಳಿದುಕೊಂಡು ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.

ಮುಖ್ಯವಾಗಿ ಪಕ್ಕದೂರುಗಳಾದ ಕೆರೆ ಕೆರೆ, ಮುಷ್ಟಗಟ್ಟೆ, ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ಜಾತ್ರೆಯ ಹಿಂದಿನ ದಿನದಿಂದಲೇ ಉಪವಾಸವಿದ್ದು, ಬೆಳಿಗ್ಗೆ ಎದ್ದು ಶ್ರದ್ದಾ ಭಕ್ತಿಯಿಂದ ಬರಿಕಾಲಿನಲ್ಲಿ ತಮ್ಮ ತಮ್ಮ ಊರುಗಳಿಂದ ನಡೆದುಕೊಂಡು ಬಂದು “ದೂಳುಗಾಯಿ” ಹೊಡೆದು ಕುಂಭವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಶಿವರಾತ್ರಿಯಂದು ರಥದ ಗಡ್ಡೆಯನ್ನು ಹೊರತೆಗೆದ ಸ್ವಚ್ಚಗೊಳಿಸಿ ಬಣ್ಣ ತೊಡೆದು ನಂತರ ಅದನ್ನು ಸುಮಾರು 60 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಕಟ್ಟಿ ಬಣ್ನ ಬಣ್ಣದ ಬಟ್ಟೆ,ಹೂವು, ಕಾಗದ, ಗೊಂಬೆ ಮತ್ತು ತಳಿರು ತೋರಣಗಳಿಂದ ಅಲಂಕೃತಗೊಳಿಸುತ್ತಾರೆ. ರಥೋತ್ಸವ ನಡೆಯುವ ದಿನಕ್ಕೂ 8 ದಿನಗಳ ಮುಂಚೆ ಶ್ರೀ ದೊಡ್ಡಬಸವೇಶ್ವರ ಮತ್ತು ನೀಲಮ್ಮನಿಗೆ ಕಂಕಣ ಕಟ್ಟುತ್ತಾರೆ. ಇಲ್ಲಿಗೆ 25 ಕಿ.ಮೀ ದೂರದ ಸಿಂದಿಗೇರಿ ಮೂಲದ ಶರಣೆ ನೀಲಮ್ಮ ಶ್ರೀ ದೊಡ್ಡಬಸವೇಶ್ವರನ ಪರಮ ಭಕ್ತೆಯಾಗಿದ್ದು, ಸಿಂದಿಗೇರಿಯಲ್ಲಿ ಮಾಯವಾಗಿ ಕುರುಗೋಡಿನಲ್ಲಿರುತ್ತಿದ್ದಳಂತೆ ಎನ್ನವುದನ್ನು ಕೆಲವು ಹಿರಿಯ ತಲೆಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.


ಸಿಂದಿಗೇರಿಯ ಲಿಂಗಾಯತ ಲಾಳಗೊಂಡರ ಕುಟುಂಬದ ಕೆಂಚಮ್ಮ (ನೀಲಮ್ಮನ ಮೊದಲ ಹೆಸರು) ಬಾಲ್ಯದಲ್ಲಿಯೇ ಅಸಾಮಾನ್ಯ ಗುಣವನ್ನು ತೋರಿಸುತ್ತಾ ದೈವಭಕ್ತಿಯ ಕಡೆಗೆ ಹೆಚ್ಚು ಗಮನ ಹರಿಸುತ್ತಾಳೆ. ಒಮ್ಮೆ ಹತ್ತಿ ಹೊಲದಲ್ಲಿ ಬೃಹದಾಕಾರದ ಬಸವಣ್ಣನ ಮೂರ್ತಿಯನ್ನು ನೋಡಿ ಪುರಾಣಗಳಲ್ಲಿ ಕೇಳುತ್ತಿದ್ದ ಬಸವಣ್ಣನೇ ಈತನೆಂದು ಗ್ರಹಿಸಿ ಇದನ್ನು ಯೋಗದ ಮೂಲಕ ಅರಿಯಲು ಯೋಗ ಸಾಧನೆಯಲ್ಲಿ ತೊಡಗುತ್ತಾಳೆ. ಅಂದೊoದು ದಿನ ಬಸವಣ್ಣನೇ ಜಂಗಮರೂಪಿಯಾಗಿ ಕೆಂಚಮ್ಮನ ಮನೆಗೆ ಭಿಕ್ಷೆ ಬೇಡಲು ಬಂದಾಗ ಕೆಂಚಮ್ಮ ಬಚ್ಚಲಲ್ಲಿ ಸ್ನಾನ ಮಾಡುತ್ತಿದ್ದಳಂತೆ. ತಾಯಿ ಹೊರಗೆ ಹೋಗಿ ಭಿಕ್ಷೆನೀಡಿ ಬರುವುದರೊಳಗೆ ಕೆಂಚಮ್ಮ ಬಚ್ಚಲಲ್ಲಿ ಮಾಯವಾಗಿರುತ್ತಾಳೆ. (ಇಂದಿಗೂ ಆ ಬಚ್ಚಲನ್ನು ಸಿಂದಿಗೇರಿಯಲ್ಲಿ ನೋಡಬಹುದು). ನಂತರ ಈಕೆಯನ್ನು ಹುಡುಕಲಾಗಿ ಕುರುಗೋಡಿನಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯರು ಬಂದು ಕರೆದಾಗ “ನಾನು ಎಲ್ಲಿಗೂ ಬರುವುದಿಲ್ಲ ಬಸವನೇ ನನ್ನ ಪತಿ ಕುರುಗೋಡಿನಲ್ಲಿಯೇ ನನ್ನ ವಾಸ”ಎಂದು ವಾದಿಸಿ ಕುರುಗೋಡಿನಲ್ಲಿಯೇ ನೆಲೆ ನಿಲ್ಲುತ್ತಾಳೆ ಶ್ರೀ ಶಿವಶರಣೆ ನೀಲಮ್ಮ.


ಕಾಲ ಕಳೆದಂತೆ ತಫೋನಿಷ್ಟೆವಹಿಸಿ ಅಧಿಕಾರವನ್ನು ಪಡೆದು ಅಂತರ್ಧಾನಳು ಆಗುತ್ತಾಳೆ. ಹೇಮಕೂಟ ಪೀಠದ ದ್ವಿತೀಯ ಶಂಭು ಎನಿಸಿದ ಕಪ್ಪಿನ ಚನ್ನ ಬಸವ ಮಹಾಸ್ವಾಮಿಗಳು ಈಕೆಯ ಯೋಗ ವ್ಯಕ್ತಿತ್ವವನ್ನು ಅರಿತು ಇಷ್ಟ ಲಿಂಗ ಸಂಸ್ಕಾರ ನೀಡಿ ದೊಡ್ಡಬಸವೇಶ್ವರನ ಹಿಂದೆ ಇದ್ದ ಬೇವಿನ ಮರದಡಿಯಲ್ಲಿ ಪೂಜಾದಿ ಆಚರಣೆಗಳಿಗೆ ಅನುಕೂಲ ಮಾಡಿ ಕೆಂಚಮ್ಮನಿಗೆ “ನೀಲಮ್ಮ” ಎಂದು ಪುನರ್ ನಾಮಕರಣ ಮಾಡಿ ಶ್ರೀ ದೊಡ್ಡಬಸವೇಶ್ವರ ಹಾಗೂ ನೀಲಮ್ಮನ ಜೊತೆ ರಥೋತ್ಸವದಲ್ಲಿ ನೀಲಮ್ಮನ ಇರುವಿಕೆಯನ್ನು ರೂಡಿಗೆ ತಂದರೆoದು ಇತಿಹಾಸ ಲೇಖಕರಾದ ಡಾ. ಕೆ.ಎಂ. ಮೇತ್ರಿ ಹಾಗೂ ಡಾ. ಮೃತ್ಯಂಜಯ ರುಮಾಲೆ ಬರೆದಿರುವ “ಕುರುಗೋಡು ನೀಲಮ್ಮನವರ ಸಾಂಕೃತಿಕ ಅಧ್ಯಯನ” ಪುಸ್ತಕದಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸಾಂಪ್ರದಾಯಕವಾಗಿ ಗಂಡು ಹೆಣ್ಣು ಸರಿಸಮ ಎಂಬುವoತೆ ರೂಡಿಸಿಕೊಂಡು ಇಂದು ಅತ್ಯಂತ ವಿಜೃಂಭಣೆಯಿoದ ರಥೋತ್ಸವವನ್ನು ಆಚರಿಸಿಕೊಂಡು ಬರುತ್ತಾರೆ. ಕಂಕಣ ಕಟ್ಟಿದ ಆರಂಭದಿoದಲೂ ನಾಗಾಭರಣೋತ್ಸವ, ಸಿಂಹ, ನವಿಲು, ಅಶ್ವ ಮತ್ತು ಬಿಳಿ ಬಸವಣ್ಣ ವಾಹನೋತ್ಸವ ನಡೆದು ಕೊನೆಗೆ ಅಂದರೆ ರಥೋತ್ಸವದ ಹಿಂದಿನ ದಿನದಂದು ರಾತ್ರಿ ಗಜ ವಾಹನೋತ್ಸವ ನಡೆಯುತ್ತದೆ. ಅದೇ ದಿನ ಸಂಜೆ ಗೋದೂಳಿ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕೆ ಅತಿ ಹೆಚ್ಚು ಜನಸಂಖ್ಯೆ ಸೇರುವುದರಿಂದ ಸಂಬoಧಿಸಿದ ಇಲಾಖೆಗಳ ಅಧಿಕಾರಿಗಳು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಪೂರ್ಣ ಪ್ರಮಾಣದ ಅಧಿಕಾರ ವಹಿಸಿಕೊಂಡಿದೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮವಹಿಸಿದ್ದು ದೇವಸ್ಥಾನಕ್ಕೆ ಸುಣ್ಣ ಬಣ್ಣ ಹಚ್ಚಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಬನ್ನಿ ಇಂತಹ ಸುಂದರ ನೋಟ ಸವಿದು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ದೊಡ್ಡಬಸವೇಶ್ವರ ಶ್ರೀ ಶಿವಶರಣೆ ನೀಲಮ್ಮನವರ ಕೃಪೆಗೆ ಪಾತ್ರರಾಗೋಣ.


ಸಂಜೆ 5.30 ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಇಂದಿನಿoದ ಮೂರು ದಿನಗಳ ಕಾಲ ಧಾರ್ಮಿಕ ದತ್ತಿ ಇಲಾಖೆ ಪಕ್ಕದ ರೈತ ಸಮುದಾಯ ಭವನದಲ್ಲಿ ಅನ್ನ ದಾಸೋಹ ಹಮ್ಮಿಕೊಂಡಿದೆ. ಬಂದ ಭಕ್ತರಿಗೆ ಕುಡಿವ ನೀರು ಒದಗಿಸಲು ದೇವಸ್ಥಾನದ ಹೊರಗೆ ಮತ್ತು ರೈತ ಸಮುದಾಯ ಭವನದ ಪಕ್ಕದಲ್ಲಿ ಒಟ್ಟು 30ಕ್ಕೂ ಹೆಚ್ಚು ಸಾರ್ವಜನಿಕ ಟ್ಯಾಪ್ ನಿರ್ಮಿಸಿಲಾಗಿದೆ. ಭಕ್ತರ ರಕ್ಷಣೆಗೆ ದೇವಸ್ಥಾನದ ಪ್ರದೇಶದಲ್ಲಿ 16 ಸಿಸಿ ಕ್ಯಾಮರ ಅಳವಡಿಸಲಾಗಿದೆ.
-ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಪ್ರಕಾಶರಾವ್.



ರಾಜ್ಯದ ಮೂಲೆ ಮೂಲೆಗಳಿಂದ ಶ್ರೀ ದೊಡ್ಡಬಸವೇಶ್ವರ ಭಕ್ತರು ಬರುವ ನರೀಕ್ಷೆ ಇದೆ, ಬರುವ ಭಕ್ತರಿಗೆ ತೊಂದರೆ ಯಾಗದಂತೆ ಕುಡಿಯುವ ನೀರು, ಶೌಚಾಲಯ, ಸಾರಿಗೆ ಸೇವೆ, ಪೊಲೀಸ್ ಸೇವೆ, ನಿರಂತರ ವಿದ್ಯುತ್, ಆರೋಗ್ಯ ಸೇವೆ ಕಲ್ಪಿಸಲು ಆಯಾ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದೇನೆ. ರಥೋತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮಗಳ ಭಕ್ತರು ಧೂಳುಗಾಯಿ, ಕಳಸ ಮತ್ತು ಪೂರ್ಣ ಕುಂಭವನ್ನು ಸಮರ್ಪಿಸುವ ಕೆಲಸ ಸುಗಮವಾಗಿ ಮಾಡಿ. ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ದೊಡ್ಡಬಸವೇಶ್ವರ ಶ್ರೀ ಶಿವಶರಣೆ ನೀಲಮ್ಮನವರ ಕೃಪೆಗೆ ಪಾತ್ರರಾಗೋಣ. —ತಹಶೀಲ್ದಾರರು ಕೆ.ರಾಘವೇಂದ್ರ ರಾವ್.


ಜಾತ್ರೆ ಪ್ರಯುಕ್ತ ಮುಂಜಾಗ್ರತ ಕ್ರಮವಾಗಿ ಡಿವೈಎಸ್‌ಪಿ ಎಸ್.ಎಸ್.ಕಾಶಿ ತೋರಣಗಲ್ಲು ನೇತೃತ್ವದಲ್ಲಿ ಸಿಪಿಐ-6, ಪಿಎಸ್‌ಐ-21, ಎಎಸ್‌ಐ-50, ಮುಖ್ಯಪೇದೆ ಹಾಗೂ ಪೇದೆ, ಮಹಿಳಾ ಪೇದೆ ಸೇರಿ-258, ದೃಶ್ಯ ಸೆರೆಹಿಡಿಯುವವರು-6 ಮತ್ತು 1 ಕೆ.ಎಸ್.ಆರ್.ಪಿ, 3 ಡಿ.ಆರ್ ವಾಹನಗಳನ್ನು ನಿಯೋಜಿಸಿದ್ದೇವೆ.
-ಸಿಪಿಐ ಚಂದನ್ ಗೋಪಾಲ್


ರಸ್ತೆಯ ಧೂಳು ನಿಯಂತ್ರಿಸಲು ನೀರು ಸಿಂಪರಣೆ ಮತ್ತು ಕುಡಿಯುವ ನೀರಿಗಾಗಿ 6 ಟ್ಯಾಂಕರ್‌ಗಳನ್ನು ಏರ್ಪಡಿಸಲಾಗಿದೆ, ನಾನಾ ಗ್ರಾಮದಿಂದ ಬರುವ ವಾಹನಗಳಿಗೆ ಏಳು ನಿಲುಗಡೆ ಕೇಂದ್ರ ಸ್ಥಾಪಿಸಿಲಾಗಿದೆ. ಪಟ್ಟಣದಲ್ಲಿರುವ ರಸ್ತೆಗಳನ್ನು ಎರಡು ಜೆಸಿಬಿ ಯಂತ್ರದ ಮೂಲಕ ಸ್ವಚ್ಚಗೊಳಿಸಲಾಗಿದೆ. ನೀರು ಸರಬರಾಜು ಕೊಳವೆ ದುರಸ್ಥಿ, ಕುಡಿವ ನೀರು ಸಂಗ್ರಹ ಟ್ಯಾಂಕ್‌ಗೆ ಔಷಧಿ ಸಿಂಪರಣೆ ಕೈಗೊಳ್ಳಲಾಗಿದೆ. ತೇರು ಬೀದಿಯಲ್ಲಿರುವ ರಥ ಸಾಗುವಾ ದಾರಿಯಲ್ಲಿ ಅಡ್ಡವಾಗುವ ಬೀದಿಬದಿ ಅಂಗಡಿಗಳನ್ನು ಬೇರೆಡೆ ತಾತ್ಕಾಲಿಕ ಸ್ಥಳಾಂತರಿಸಲು ಅಂಗಡಿ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಹಾಯ ಕೋರಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ್.

ಆರೋಗ್ಯ ಇಲಾಖೆ ಜಾತ್ರಾರ್ಥಿಗಳ ಆರೋಗ್ಯ ರಕ್ಷಣೆಗೆ ಸಿದ್ಧಗೊಂಡಿದ್ದು 5 ವೈದ್ಯರು, ಇಬ್ಬರು ಸ್ಟಾö್ಯಪ್‌ನರ್ಸ್ ಹಾಗೂ ಇಬ್ಬರು ಡಿ ಗ್ರೂಪ್ ಸಿಬ್ಬಂಧಿಯನ್ನು ನಿಯೋಜಿಸಿದ್ದೇವೆ. ಅಲ್ಲದೆ ರಾತ್ರಿ ವೇಳೆ ಹೆಚ್ಚಿನ ನಿಗಾ ವಹಿಸಿಲು ರಾತ್ರಿ ಪಾಳೆಗೆ ವೈದ್ಯರನ್ನು ನಿಯೋಜಿಸಿಕೊಂಡಿದೆ. ಅಲ್ಲದೆ ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡ ನಿಯಂತ್ರಿಸಲು ನಾಲೂಕ್ಕು ರಸ್ತೆಯಲ್ಲಿ ಅಂಬ್ಯೂಲೆನ್ಸ್ಗಳನ್ನು ಸಿದ್ಧಗೊಳಿಸಲಾಗಿದೆ. ಒಂದನ್ನು ಬಳ್ಳಾರಿ ರಸ್ತೆ ಹಾಗೂ ಇನೊಂದನ್ನು ಬಾದನಹಟ್ಟಿ ರಸ್ತೆ ಮತ್ತು ಕಂಪ್ಲಿ ರಸ್ತೆ ಉಳಿದ ಒಂದನ್ನು ದೇವಸ್ಥಾನದ ಪ್ರಾಂಗಣಕ್ಕೆ ನಿಯೋಜಿಸಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top