ಬಳ್ಳಾರಿ: ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿ ಈಗಾಗಲೇ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಆರಂಭವಾಗಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅರ್ಜಿ ಸಂಗ್ರಹಿಸಿ ಒಂದು ಪ್ರಮಾಣಪತ್ರ ನೀಡಲಿದ್ದಾರೆ. ಆಗಸ್ಟ್ ವೇಳೆಗೆ ಗೃಹಲಕ್ಷ್ಮೀ ಯೋಜನೆ ಆರಂಭವಾಗಲಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಬಿ.ನಾಗೇಂದ್ರ ಹೇಳಿದರು.
ಬಳ್ಳಾರಿಯಲ್ಲಿ ಬಕ್ರೀದ್ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಜನರ ಮನೆ ಮನೆಗೆ ತೆರಳಿ ಅರ್ಜಿ ಸಂಗ್ರಹಿಸಲಿದ್ದಾರೆ. ಅವರು ಒಂದು ಪ್ರಮಾಣಪತ್ರ ನೀಡುತ್ತಾರೆ. ಗ್ರಾಮ ಒನ್, ಸೇವಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನದಟ್ಟಣೆ ಆಗಬಾರದೆಂಬ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 10 ನೇ ತಾರೀಕಿಗೂ ಮೊದಲು ಅರ್ಜಿ ಸಲ್ಲಿಕೆ ಪೂರ್ಣಗೊಳಿಸುತ್ತೇವೆ ಎಂದರು.
ಮುಂಗಾರು ಹಂಗಾಮಿನ ಬಿತ್ತನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬೀಜ, ಗೊಬ್ಬರ, ರಾಸಾಯನಿಕಗಳ ಸಂಗ್ರಹ ಇದೆ ಎಂದು ಅವರು ಹೇಳಿದರು.
ಬಕ್ರೀದ್ ಶುಭಾಶಯ: ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಾವೆಲ್ಲ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದೆವು. ನಗರ ಗ್ರಾಮೀಣ ಕ್ಷೇತ್ರ ಸೇರಿದಂತೆ ರಾಜ್ಯದಾದ್ಯಂತ ಇಂದು ಮುಸ್ಲಿಂ ಬಾಂಧವರು ಬಕ್ರೀದ್ ಆಚರಣೆಯಲ್ಲಿ ಸಡಗರ ಸಂಭ್ರಮದಿಂದ ಭಾಗಿಯಾಗಿದ್ದಾರೆ. ಅವರೆಲ್ಲರಿಗೂ ಹಾಗೂ ಒಟ್ಟಾರೆ ರಾಜ್ಯದ ಎಲ್ಲ ಜನರಿಗೂ ಬಕ್ರೀದ್ ಶುಭಾಶಯ ಕೋರುವೆ ಎಂದು ಸಚಿವ ನಾಗೇಂದ್ರ ಹೇಳಿದರು.
ಬಳ್ಳಾರಿ ಶಾಂತಿ ಸೌಹಾರ್ದಕ್ಕೆ ಹೆಸರಾದ ತಾಣ. ಇಲ್ಲಿ ಶಾಂತಿ, ಹೌಹಾರ್ದತೆ ಹಾಗೂ ಭಾತೃತ್ವ ಹೀಗೇ ಇರಲಿ ಎಂದು ಆಶಿಸುವೆ ಎಂದರು.
ಹತ್ತು ದಿನಗಳ ನಂತರ ಮೋಡ ಬಿತ್ತನೆ ಬಗ್ಗೆ ಚಿಂತನೆ: ಮುಂಗಾರು ಮಳೆ ತಡ ಆಗಿದೆ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ಈ ವೇಳೆಗೆ ಶೇ.330 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಕೇವಲ 70 ಮಿ.ಮೀ. ಮಳೆ ಆಗಿದೆ. ಹೀಗಿದ್ದರೂ ಉಳಿದ ಪ್ರದೇಶ ನೀರಾವರಿ ಇದ್ದು, ಜಲಾಶಯದ ಜಲಾನಯನ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ ಬರುತ್ತಿದ್ದು, ತುಂಗಭದ್ರಾ ಜಲಾಶಯ ಬೇಗ ತುಂಬಬಹುದೆಂಬ ನಿರೀಕ್ಷೆ ಇದೆ. ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಉತ್ತಮವಾಗಿ ಮಳೆ ಬರುತ್ತಿದ್ದು, ಬೇಗ ಜಲಾಶಯ ತುಂಬಲಿ ಎಂದು ನಾವೆಲ್ಲ ಪ್ರಾರ್ಥನೆ ಮಾಡಿದ್ದೇವೆ ಎಂದರು.
ಮಳೆ ತಡವಾದರೆ ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಆದರೆ ಇನ್ನೂ ಹತ್ತು ದಿನಗಳ ಅವಧಿಯಲ್ಲಿ ಮಳೆ ಆಗುವ ಸಾಧ್ಯತೆ ಇದ್ದು, ಹತ್ತು ದಿನಗಳ ನಂತರ ಸ್ಥಿತಿ ನೋಡಿಕೊಂಡು ಸಿಎಂ ಅವರ ಗಮನಕ್ಕೆ ತಂದು ಮೋಡ ಬಿತ್ತನೆ ಮಾಡಲಾಗುವುದು. ಆದರೆ ಇನ್ನೂ ಹತ್ತು ದಿನಗಳ ಕಾಲ ಕಾದು ನೋಡುತ್ತೇವೆ ಎಂದರು.
ನಗರ ಶಾಸಕ ನಾರಾ ಭರತ್ ರೆಡ್ಡಿ, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಹುಸೇನ್ ಪೀರಾ, ಬಿಆರ್ ಎಲ್ ಸೀನಾ ಸೇರಿದಂತೆ ಹಲವರು ಹಾಜರಿದ್ದರು.