ಈ ಭ್ರಷ್ಟ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಕಳಂಕ ಅಂಟಿಕೊಂಡಿದೆ

ಬೆಂಗಳೂರು : ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಬಲಿಯಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅವರ ಪರವಾಗಿ ನಿಲ್ಲಲು ಕಾಂಗ್ರೆಸ್ ಪಕ್ಷದ ನಾಯಕರ ತಂಡ ಇಂದು ಮಧ್ಯಾಹ್ನ ಬೆಳಗಾವಿಗೆ ತೆರಳಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಬೇಕು. ಇಂತಹ ಬೇರೆ ಪ್ರಕರಣಗಳಲ್ಲಿ ಹೇಗೆ ಕ್ರಮ ಕೈಗೊಳ್ಳಲಾಗುವುದೋ ಅದೇ ರೀತಿ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ವಿಚಾರದಲ್ಲಿ ಈ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮಂತ್ರಿಗಳು ಜಾರ್ಜ್ ಅವರನ್ನು ಕೊಲೆಗಾರ ಎಂದಿದ್ದರು. ನಾವು ಅವರನ್ನು ಈಗ ಏನೆಂದು ಕರೆಯಬೇಕು? ಸಂತೋಷ್ ಪಾಟೀಲ್ ಅವರಿಗೆ ಸಾಯುವಂತೆ ಕಿರುಕುಳ ನೀಡಿದ್ದು, ಈಗ ಸಚಿವವರೂ ಕೂಡ ಕೊಲೆಗಾರನಾಗಿದ್ದಾರೆ. ಅವರು ನೀಡಿದ ಕಿರುಕುಳ ಹೇಗಿತ್ತು ಎಂದು ಸಂತೋಷ್ ಪಾಟೀಲ್ ಅವರ ಇಡೀ ಕುಟುಂಬದವರೇ ಹೇಳಿದ್ದಾರೆ.

ಈ ಭ್ರಷ್ಟ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಕಳಂಕ ಅಂಟಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ನಾಯಕರು ಈ ವಿಚಾರವಾಗಿ ಏನನ್ನೂ ಮಾತನಾಡಿಲ್ಲ. ಅವರು ಸಚಿವರಿಂದ ರಾಜೀನಾಮೆ ಪಡೆಯುತ್ತಾರೋ, ವಜಾ ಮಾಡುತ್ತಾರೋ ನಮಗೆ ಗೊತ್ತಿಲ್ಲ. ಅದು ಮುಂದಿನ ವಿಚಾರ. ಆದರೆ ಮೊದಲು ಈಶ್ವರಪ್ಪನವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು. ಸಂತೋಷ್ ಕುಟುಂಬ ಸದಸ್ಯರು ಕೊಟ್ಟಿರುವ ದೂರಿನಲ್ಲಿ ಭ್ರಷ್ಟಾಚಾರದ ಆರೋಪಗಳು ಇದ್ದರೂ ಭ್ರಷ್ಟಾಚಾರ ಪ್ರಕರಣ ಯಾಕೆ ದಾಖಲಿಸಿಲ್ಲ? ಸರ್ಕಾರದ ಒತ್ತಡದ ಮೇರೆಗೆ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿ ಸಚಿವರನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾವು ನಮ್ಮ ಹೋರಾಟ ಹಮ್ಮಿಕೊಂಡಿದ್ದೇವೆ. ನಾಳೆ ಬೆಳಗ್ಗೆ ನಡೆಯಬೇಕಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದ್ದು, ನಾಳೆ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಕಾರ್ಯಕ್ರಮದ ಮೂಲಕ ಬೆಳಗ್ಗೆ 10.30ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮುಖ್ಯಮಂತ್ರಿಗಳ ನಿವಾಸದ ಬಳಿ ತೆರಳಿ ಘೇರಾವ್ ಹಾಕಲು ನಿರ್ಧರಿಸಿದ್ದೇವೆ.

ನಂತರ ಇದೇ ಏ. 15 ರಿಂದ ಐದು ದಿನಗಳ ಕಾಲ ರಾಜ್ಯದ ಪ್ರಮುಖ ನಾಯಕರ ನೇತೃತ್ವದಲ್ಲಿ 7-8 ತಂಡಗಳನ್ನು ರಚಿಸಿ ಎಲ್ಲ ಜಿಲ್ಲೆಗಳಿಗೂ ಹೋಗಿ, ಈ 40 % ಸರ್ಕಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ನಂತರ ಬ್ಲಾಕ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಜನರೇ ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ನಿದ್ದೆ ಮಾಡದೇ ಹೋರಾಟ ಮಾಡುತ್ತೇವೆ. ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪಕ್ಷ ಮಾಡುತ್ತದೆ.

Leave a Comment

Your email address will not be published. Required fields are marked *

Translate »
Scroll to Top