ಈಶ್ವರಪ್ಪ ಅವರ ಮೇಲೆ ಎಫ್.ಐ.ಆರ್ ದಾಖಲು

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಮೇಲೆ ನಿನ್ನೆ ಎಫ್.ಐ.ಆರ್ ದಾಖಲಾಗಿದೆ, ಇದರಲ್ಲಿ ಸೆಕ್ಷನ್-34 ಹಾಗೂ ಸೆಕ್ಷನ್-306 ರಡಿ ಪ್ರಕರಣ ದಾಖಲಾಗಿದೆ. ಮೃತ ಸಂತೋಷ್ ಪಾಟೀಲ್ ಅವರ ಕುಟುಂಬಸ್ಥರು ಆರೋಪಿಸಿದಂತೆ ಸಂತೋಷ್ ಪಾಟೀಲ್ ಅವರು ರೂ. 4 ಕೋಟಿ ಮೊತ್ತದ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ, ಸಚಿವ ಈಶ್ವರಪ್ಪ ಮತ್ತು ಅವರ ಪಿಎ ಗಳು 40% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ. ಆ ಕಮಿಷನ್ ಹಣ ಕೊಡದ ಕಾರಣಕ್ಕೆ ವರ್ಕ್ ಆರ್ಡರ್ ಕೊಟ್ಟಿಲ್ಲ ಮತ್ತು ಬಿಲ್ ಪಾವತಿಸಿಲ್ಲ. ಈಶ್ವರಪ್ಪ ಅವರನ್ನು ಮೃತ ಸಂತೋಷ್ ಪಾಟೀಲ್ ಅನೇಕ ಬಾರಿ ಭೇಟಿ ಮಾಡಿದರೂ ಪ್ರಯೋಜನವಾಗದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾರೆ, ಇಷ್ಟೆಲ್ಲಾ ಮಾಡಿದರೂ ಕಮಿಷನ್ ಕೊಡದ ಕಾರಣಕ್ಕೆ ಬಿಲ್ ಪಾವತಿ ಮಾಡಿಲ್ಲ ಎಂದು ದೂರು ನೀಡಿದ್ದಾರೆ. ಇದೊಂದು ಭ್ರಷ್ಟಾಚಾರ ಪ್ರಕರಣವಾಗಿದ್ದರೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ – 13 ರಡಿ ಕೇಸ್ ದಾಖಲಿಸಿಲ್ಲ. ಈಶ್ವರಪ್ಪ ಮತ್ತು ಇತರೆ ಆರೋಪಿಗಳ ಮೇಲೆ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಬೇಕು ಎಂಬುದು ನಮ್ಮ ಒತ್ತಾಯ.

ಉಡುಪಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಂತೋಷ್ ತೆರಳಿದ್ದರು, ಅದು ಸಾಧ್ಯವಾಗದಿದ್ದಾಗ ಮನನೊಂದು ವಾಟ್ಸಾಪ್ ಮೆಸೇಜ್ ನಲ್ಲಿ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಹೊಣೆ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಾಟ್ಸಾಪ್ ಮೆಸೇಜನ್ನೆ ಡೆತ್ ನೋಟ್ ಎಂದು ಪರಿಗಣಿಸಬೇಕು. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಈ ಕೂಡಲೇ ಸಚಿವರ ಬಂಧನವಾಗಬೇಕು. ಇದರ ಜೊತೆಗೆ ಸಂಪುಟದಿಂದ ವಜಾ ಮಾಡಬೇಕು. ಇಂದು ಈ ವಿಚಾರವಾಗಿ ಪಕ್ಷದ ವತಿಯಿಂದ ರಾಜ್ಯಪಾಲರನ್ನು ಭೇಟಿಮಾಡಿ ಮನವಿ ಪತ್ರ ಕೊಟ್ಟಿದ್ದೇವೆ. ಈಶ್ವರಪ್ಪ ಮಾತ್ರವಲ್ಲ ಇಡೀ ಸರ್ಕಾರದ ಮೇಲೆ 40% ಕಮಿಷನ್ ಆರೋಪವಿದೆ. ಇದಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಮಾಡಿರುವ ಆರೋಪವೆ ಸಾಕ್ಷಿ. ಈ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ 40% ಕಮಿಷನ್ ನಡೆಯುತ್ತಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಜನ ಜಾಗೃತಿಯನ್ನು ಮೂಡಿಸಲು ನಾವು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಇದಕ್ಕಾಗಿ ಡಿ.ಕೆ ಶಿವಕುಮಾರ್ ಅವರು 6 – 7 ತಂಡ ರಚನೆ ಮಾಡುತ್ತಾರೆ. ಐದು ದಿನಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇವೆ. ಇದರ ಜೊತೆಗೆ ನಾಳೆ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳಿಗೆ ಘೇರಾವು ಹಾಕುತ್ತೇವೆ.

ರಾಜ್ಯ ಸರ್ಕಾರದ 40% ಕಮಿಷನ್ ವಿಚಾರವಾಗಿ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ, ನನಗೆ ಪ್ರಸ್ತಾವಿಕ ಮಾತುಗಳನ್ನೇ ಆಡಲು ಅವಕಾಶ ನೀಡದೆ ಸಭಾಧ್ಯಕ್ಷರು ಮನವಿಯನ್ನು ತಿರಸ್ಕಾರ ಮಾಡಿದ್ದರು. ಇದರರ್ಥ ಸಭಾಧ್ಯಕ್ಷರು ಸರ್ಕಾರದ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 07/06/2021 ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಸರ್ಕಾರದ 40% ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ. ತನ್ನನ್ನು ತಾನು ಚೌಕಿದಾರ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಯಾವ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬಿಜೆಪಿ ಕಾರ್ಯಕರ್ತನೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಸರ್ಕಾರ ಜನರ ತೆರಿಗೆ ಹಣ ಲೂಟಿಗೆ ಇಳಿದಿದೆ. ಇದರ ಬಗ್ಗೆ ನಾವು ಖಂಡಿತಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.

Leave a Comment

Your email address will not be published. Required fields are marked *

Translate »
Scroll to Top