ಶ್ರೀಲಂಕಾ: ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಮಿಂಚಿ, ಆರೆಂಜ್ ಕ್ಯಾಪ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಲಂಕಾ ಆಟಗಾರರ ಅವಮಾನಕ್ಕೆ ತಮ್ಮ ಬ್ಯಾಟ್ ಮೂಲಕವೇ ಸಿಡಿಲಬ್ಬರದ ಉತ್ತರ ನೀಡಿರುವ ವೈಭವ್, ಶ್ರೀಲಂಕಾ ನೆಲದಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ ‘ಎ‘, ಶ್ರೀಲಂಕಾ ‘ಎ‘ ಹಾಗೂ ಅಫ್ಗಾನಿಸ್ತಾನ ‘ಎ‘ ತಂಡಗಳ ನಡುವಿನ ತ್ರಿಕೋನ ಸರಣಿಯ ಆರಂಭದ 4 ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದರು. ಇದರಿಂದಾಗಿ ತೀವ್ರ ಟೀಕೆಗೂ ಒಳಗಾಗಿದ್ದರು. ಆದರೆ, ಅತ್ಯಂತ ನಿರ್ಣಾಯಕವಾಗಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವೈಭವ್ ಅಕ್ಷರಶಃ ರೌದ್ರಾವತಾರ ತಳೆದರು.
11 ಎಸೆತಗಳಲ್ಲಿ ಅರ್ಧಶತಕ, 320ರ ಸ್ಟ್ರೈಕ್‌ರೇಟ್! ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡದ ಪರವಾಗಿ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 11 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಇವರು, ಎದುರಾಳಿ ಬೌಲರ್‌ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದರು. ಒಟ್ಟು 29 ಎಸೆತಗಳನ್ನು ಎದುರಿಸಿದ ವೈಭವ್, 8 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 320ರ ಭೀಕರ ಸ್ಟ್ರೈಕ್‌ರೇಟ್‌ನಲ್ಲಿ 94 ರನ್ ಚಚ್ಚಿದರು.
ವಿಶ್ವದಾಖಲೆ ಹಾಗೂ ಎಬಿಡಿ ದಾಖಲೆ ತಪ್ಪಿಸಿಕೊಂಡ ವೈಭವ್: ಈ ಹಿಂದೆ ಐಪಿಎಲ್‌ನಲ್ಲಿಯೂ 28 ಎಸೆತಗಳಲ್ಲಿ 97 ರನ್ ಸಿಡಿಸಿದ್ದಾಗ 29ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದ ವೈಭವ್, ಇಲ್ಲಿಯೂ ಅದೇ ತಪ್ಪು ಮಾಡಿದರು. ಭರ್ಜರಿ ಶತಕದ ಸನಿಹದಲ್ಲಿದ್ದಾಗ ಸಿಕ್ಸರ್ ಬಾರಿಸಲು ಹೋಗಿ ಔಟ್ ಆದರು. ಆ ಮೂಲಕ ಭಾರತ ಎ ತಂಡದ ಪರ ವೇಗದ ಶತಕ ಸಿಡಿಸುವ ಸುವರ್ಣ ಅವಕಾಶ ಕೈತಪ್ಪಿತು.
ಮಾತ್ರವಲ್ಲದೆ, ಲಿಸ್ಟ್ ಎ (List A) ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ದಿಗ್ಗಜ ಎ.ಬಿ. ಡಿವಿಲಿಯರ್ಸ್ (31 ಎಸೆತಗಳಲ್ಲಿ ಶತಕ) ಅವರ ಜಾಗತಿಕ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶವನ್ನು ವೈಭವ್ ಸೂರ್ಯವಂಶಿ ಕೇವಲ 6 ರನ್‌ಗಳ ಅಂತರದಿಂದ ಮಿಸ್ ಮಾಡಿಕೊಂಡರು.

ಅವಮಾನಿಸಿದ ಲಂಕಾ ಆಟಗಾರರಿಗೆ ಬ್ಯಾಟ್‌ನಿಂದಲೇ ಉತ್ತರ! ಇದೇ ದಂಬುಲ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಸರಣಿಯ ಕಳೆದ ಪಂದ್ಯದಲ್ಲಿ ಭಾರತ ಎ ತಂಡವು ಶ್ರೀಲಂಕಾ ಎ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು. ಆ ಸಂದರ್ಭದಲ್ಲಿ ಶ್ರೀಲಂಕಾ ಆಟಗಾರರು ವೈಭವ್ ಸೂರ್ಯವಂಶಿ ಅವರನ್ನು ಗುರಿಯಾಗಿಸಿಕೊಂಡು ಅತ್ಯಂತ ಅಸಭ್ಯವಾಗಿ ಕಾಲೆಳೆದಿದ್ದರು. "ಇದು ಐಪಿಎಲ್ ಅಲ್ಲ, ಸುಮ್ಮನೆ ಮನೆಗೆ ಹೋಗು" ಎಂದು ಅವಮಾನಿಸಿದ್ದರು. ಲಂಕಾ ಆಟಗಾರರ ಈ ಮಾತುಗಳಿಂದ ತೀವ್ರ ಆಕ್ರೋಶಗೊಂಡಿದ್ದ ವೈಭವ್, ಮೈದಾನದಲ್ಲೇ ಲಂಕಾ ವೇಗಿಗಳ ಮೇಲೆ ಹಲ್ಲೆಗೂ ಮುಂದಾಗಿದ್ದರು.
ಆದರೆ, ಫೈನಲ್ ಪಂದ್ಯದಲ್ಲಿ ತಮ್ಮ ಕೋಪವನ್ನು ರನ್‌ಗಳಾಗಿ ಪರಿವರ್ತಿಸಿದ ವೈಭವ್, ಕೆಣಕಿದ ಶ್ರೀಲಂಕಾ ಆಟಗಾರರ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಅಂದು ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡಿದ್ದ ಲಂಕಾ ಕ್ರಿಕೆಟಿಗರು, ಇಂದು ವೈಭವ್ ಬ್ಯಾಟಿಂಗ್ ಅಬ್ಬರಕ್ಕೆ ದಿಕ್ಕೆಟ್ಟು ನಿಲ್ಲುವಂತಾಯಿತು. 15 ವರ್ಷದ ಈ ಬಾಲಕನ ಜಂಟಲ್ಮನ್ ಆಟಕ್ಕೆ ಈಗ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ.