ಬೆಂಗಳೂರು : ರಾಜ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ. ಅವರಿಗೆ ಪ್ರಶಸ್ತಿ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರ ವಂದನಾ ನಿರ್ಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದರೆ ಇವರಿಗೆ ಕೋಪ ಬರುತ್ತದೆ. ಇದುವರೆಗೂ ಸಿದ್ದರಾಮಯ್ಯನವರು 7 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಅತಿ ಹೆಚ್ಚು ಸಾಲ ಮಾಡಿರುವುದು ಸಿದ್ದರಾಮಯ್ಯ ಎಂದರು.
ಮಾಡಿರುವ ಸಾಲ ವನ್ನು ತೀರಿಸಲು ಆಗುತ್ತಿಲ್ಲ. ಹೀಗಿರುವಾಗ ಆರ್ಥಿಕ ಶಿಸ್ತು ಎಲ್ಲಿಂದ ಬರುತ್ತದೆ, ಬದನೆಕಾಯಿ ಎಂದರು.
ಕರ್ನಾಟಕದಲ್ಲೇ ಅತಿ ಹೆಚ್ಚು ಸಾಲ ಮಾಡಿರುವ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗೆ ಪ್ರಶಸ್ತಿ ನೀಡಬೇಕು ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾಗಿದ್ದರೆ ಗೃಹಲಕ್ಷ್ಮೀ ಯೋಜನೆಯ 2025ರ ಫೆಬ್ರವರಿ ಕಂತಿನ 5 ಸಾವಿರ ಕೋಟಿ ಹಣ ಎಲ್ಲಿ ಹೋಯಿತು. ಅನ್ನಭಾಗ್ಯಕ್ಕೂ ಕನ್ನ ಹಾಕಿದ್ದಾರೆ. ಕಳೆದ ವರ್ಷದ ಜನವರಿಯ ಅನ್ನಭಾಗ್ಯದ 657 ಕೋಟಿ ರೂ. ಹಣ ಬಿಡುಗಡೆಯಾಗಿಲ್ಲ ಎಂದರು.
ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಉಪಮುಖ್ಯಮಂತ್ರಿಗಳು ಹಣ ಬಿಡುಗಡೆ ಯಾಗಿಲ್ಲ. ಆ ಹೆಣ್ಣು ಮಗಳು ಏನು ಮಾಡುತ್ತಾರೆ ಎಂದು ಪರ ವಹಿಸುತ್ತಾರೆ. ಯಾರ ಮಾತನ್ನು ನಂಬುವುದು ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೋಡೆತ್ತುಗಳು ಎಂದೆಲ್ಲಾ ಹೇಳುತ್ತಿದ್ದರು. ಈಗ ಕುಂಟೆತ್ತುಗಳಾಗಿದ್ದಾರೆ. ಇವರಿಬ್ಬರು ಒಂದೊಂದು ದಾರಿಯಲ್ಲಿ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು.
ಇದೊಂದು ಇಲ್ಲಗಳ ಸರ್ಕಾರ. ಆಡು ಮುಟ್ಟಿದ ಸೊಪ್ಪಿಲ್ಲ ಎಂಬಂತೆ ಈ ಸರ್ಕಾರ ಲೂಟಿ ಮಾಡದ ಇಲಾಖೆ ಇಲ್ಲ. ಜನ ಕೆಲಸ ಆಗಿಲ್ಲವೆಂದು, ಗುತ್ತಿಗೆದಾರರು ಹಣ ಬಿಡುಗಡೆಯಾಗಿಲ್ಲವೆಂದು, ಅಂಗನವಾಡಿ ಕಾರ್ಯಕರ್ತೆಯರು ವೇತನ ಬಿಡುಗಡೆಯಾಗಿಲ್ಲವೆಂದು ಪರದಾಡುತ್ತಿದ್ದರೆ, ಮಂತ್ರಿಗಳು ಹಣ ಮಾಡುವುದರಲ್ಲಿ ಮುಳುಗಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಖಜಾನೆ ಖಾಲಿ.. ಖಾಲಿ.. ಎಂದು ಅಶೋಕ್ ಹೇಳಿದರು.
ಖಜಾನೆಯಲ್ಲಿ ಹೆಗ್ಗಣಗಳ ಕಾಟ ಇದೆ. ಸರ್ಕಾರ ದಿವಾಳಿಯಾಗಿದೆ ಎಂದು ಅವರು ಹೇಳಿದರು.
ರಾಮನನ್ನು ಕಂಡರೆ ಅಲರ್ಜಿ
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಆಕ್ಷೇಪದ ಮಾತುಗಳನ್ನು ಹೇಳಿದೆ. ಇವರಿಗೆ ರಾಮನನ್ನು ಕಂಡರೆ ಅಲರ್ಜಿ. ರಾಮನನ್ನು ಕಂಡರೆ ಏಕೆ ನಿಮಗೆ ವಿರೋಧ ಎಂದು ಪ್ರಶ್ನಿಸಿದರು