ನವದೆಹಲಿ: ಬಿಡದಿಯ ಮಂಡಲಹಳ್ಳಿ ಗ್ರಾಮದಲ್ಲಿ ರೈತರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣ ರಾಜಕೀಯವಾಗಿ ಹೊಸ ತಿರುವು ಪಡೆದುಕೊಂಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ನೇರ ಸವಾಲು ಹಾಕಿದ್ದಾರೆ. "ತಾಕತ್ತಿದ್ದರೆ ನನ್ನನ್ನೇ ಮೊದಲ ಆರೋಪಿಯನ್ನಾಗಿ ಮಾಡಿ ಬಂಧಿಸಿ," ಎಂದು ಅವರು ಗುಡುಗಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಪರ ನಿಂತು, ನಾಡಿದ್ದು ಮಂಡಲಹಳ್ಳಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ಘೋಷಿಸಿದರು. ರೈತರ ಹೋರಾಟವನ್ನು ಬೆದರಿಕೆ ಮತ್ತು ಪ್ರಕರಣಗಳಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಕ್ರಮವಾಗಿ ಜಮೀನಿನ ಸರ್ವೆಗೆ ಅಧಿಕಾರಿಗಳು ಬಂದಿದ್ದರಿಂದ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಂಬಂಧವಿಲ್ಲದವರ ದೂರಿನ ಆಧಾರದಲ್ಲಿ ರೈತರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.
"ಕೆಲವರು ನಾನು ರೈತರನ್ನು ಚಿತಾವಣೆ ಮಾಡಿದ್ದೇನೆ ಎನ್ನುತ್ತಿದ್ದಾರೆ. ಹಾಗಿದ್ದರೆ ನನ್ನನ್ನೇ ಮೊದಲ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಿ. ಧೈರ್ಯವಿದ್ದರೆ ಬಂಧಿಸಿ," ಎಂದು ಸವಾಲು ಹಾಕಿದ ಅವರು, ಮುಖ್ಯಮಂತ್ರಿಯ ಹಠದ ಹಿಂದೆ ಇರುವ ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರ ಪ್ರಕಾರ, ಗ್ರಾಮದಲ್ಲೇ ಇಲ್ಲದವರು ಮತ್ತು ದೆಹಲಿಯಲ್ಲಿದ್ದವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಇಂತಹ ಕ್ರಮಗಳಿಂದ ರೈತರ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ. ರೈತರು ಶಾಂತಿಯುತವಾಗಿ ತಮ್ಮ ಹೋರಾಟ ಮುಂದುವರಿಸಬೇಕು ಮತ್ತು ನ್ಯಾಯಾಲಯದ ಮೂಲಕ ನ್ಯಾಯ ಪಡೆಯೋಣ ಎಂದು ಅವರು ಕರೆ ನೀಡಿದರು.
22ಕ್ಕೂ ಹೆಚ್ಚು ಸೆಕ್ಷನ್‌ಗಳಡಿ ಪ್ರಕರಣ
ಬಿಡದಿ ಟೌನ್‌ಶಿಪ್ ವಿವಾದದ ವೇಳೆ ನಡೆದ ಗಲಾಟೆಗೆ ಸಂಬಂಧಿಸಿ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಗಾಯಗೊಂಡ ಕಾರು ಚಾಲಕ ಸಮೀರ್ ನೀಡಿದ ಪ್ರತ್ಯೇಕ ದೂರುಗಳ ಆಧಾರದಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಪ್ರಕರಣದಲ್ಲಿ ಬಿಎನ್‌ಎಸ್ ಸೆಕ್ಷನ್ 109(1) (ಕೊಲೆ ಯತ್ನ), 118(1) (ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯ), ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಸೇರಿದಂತೆ ಜಾಮೀನು ರಹಿತ ಹಲವು ಆರೋಪಗಳನ್ನು ಸೇರಿಸಲಾಗಿದೆ. ಒಟ್ಟು 22ಕ್ಕೂ ಹೆಚ್ಚು ಸೆಕ್ಷನ್‌ಗಳನ್ನು ದಾಖಲಿಸಿರುವ ಪೊಲೀಸರು, ಸದ್ಯದ ತನಕ ಯಾವುದೇ ರೈತರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮಂಡಲಹಳ್ಳಿ ಭೂ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಕಂಡುಬಂದಿದೆ.