LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Politics News

ಬಜೆಟ್‌ ಪೂರ್ವಬಾವಿ ಸಭೆ ಆರಂಭಿಸದ ಸಿದ್ದರಾಮಯ್ಯ : ಕುತೂಹಲಕ್ಕೆ ಕಾರಣವಾದ ನಡೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌‍ ಸರ್ಕಾರದಲ್ಲಿ ನಾಯಕತ್ವದ ಗೊಂದಲಗಳು ಪೂರ್ಣ ಪ್ರಮಾಣದಲ್ಲಿ ಇತ್ಯರ್ಥವಾಗದೇ ಇರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭಿಸಿಲ್ಲ.

ಈ ವೇಳೆಗಾಗಲೇ ಸರಣಿ ಸಭೆಗಳನ್ನು ನಡೆಸಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದ ಸಿದ್ದರಾಮಯ್ಯ, ಈ ಬಾರಿ ಗಾಢವಾದ ಮೌನಕ್ಕೆ ಜಾರಿದ್ಧಾರೆ.

ರಾಜಕೀಯ ಲೆಕ್ಕಾಚಾರದ ನಡುವೆ ಸಿದ್ದರಾಮಯ್ಯ ಅವರ ನಡೆ ಹಾಗೂ ಅವರು ತಟಸ್ಥವಾಗಿರುವುದಕ್ಕೂ ಹಲವು ಅನುಮಾನಗಳು ಹುಟ್ಟುಕೊಂಡಿವೆ. ನಾನಾ ಆಯಾಮಗಳಲ್ಲಿ ಇದು ಚರ್ಚೆಯಾಗುತ್ತಿದೆ.

ಹಣಕಾಸು ಸಚಿವರಾದಾಗಿನಿಂದಲೂ ಸಿದ್ದರಾಮಯ್ಯ ಪ್ರತಿ ವರ್ಷ ಡಿಸೆಂಬರ್‌ ವೇಳೆಗಾಗಲೇ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸುವುದು ರೂಢಿ ಸಂಪ್ರದಾಯ. ಆದರೆ ಈ ಬಾರಿ ಹೊಸ ವರ್ಷ ಆರಂಭವಾದರೂ ಈವರೆಗೂ ಬಜೆಟ್‌ ತಯಾರಿಕೆಯ ತಂಟೆಗೆ ಸಿದ್ದರಾಮಯ್ಯ ಹೋಗಿಲ್ಲ. ಇದು ಹಲವು ಅನುಮಾನಗಳನ್ನು ಮೂಡಿಸಿದೆ. ಈ ಬಾರಿ ಬಜೆಟ್‌ ಮಂಡನೆ ವಿಳಂಬವಾಗುವ ಸಾಧ್ಯತೆಗಳಿವೆ.

ಇತ್ತೀಚಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬಜೆಟ್‌ ಮಂಡನೆಯ ವೇಳೆಗೆ ನಾಯಕತ್ವದ ಗೊಂದಲದ ಬಗ್ಗೆ ಕಾಂಗ್ರೆಸ್‌‍ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಯಾರಾದರೂ ಒಬ್ಬರು ಬಜೆಟ್‌ ಮಂಡಿಸಲೇಬೇಕಿದೆ ಆದರೆ ಅದು ಯಾರು ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು ಎಂದಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ತಾವು ಮುಖ್ಯಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮೂಲಗಳ ಪ್ರಕಾರ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಡಿ.ಕೆ.ಶಿವಕುಮಾರ್‌ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಫೆಬ್ರವರಿಯಲ್ಲಿ ರಾಜ್ಯದ ಬಜೆಟ್‌ ಮಂಡನೆ ಆಗಲಿದೆ. ಅದಕ್ಕಾಗಿ ಡಿಸೆಂಬರ್‌ ನಿಂದಲೇ ಪೂರ್ವ ತಯಾರಿಗಳು ಚಾಲುಗೊಳ್ಳುತ್ತವೆ. ಪ್ರತಿಯೊಂದು ಇಲಾಖೆಯಲ್ಲೂ ಈವರೆಗೂ ಆಗಿರುವ ವೆಚ್ಚ ಮತ್ತು ಖರ್ಚಾಗದೆ ಉಳಿದ ಅನುದಾನದ ಬಗ್ಗೆ ಆರ್ಥಿಕ ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಜನವರಿಯಲ್ಲಿ ನಡೆಯುವ ಸಭೆಗಳಲ್ಲಿ ಇಲಾಖಾವಾರು ಹೊಸ ಘೋಷಣೆಗಳ ಬಗ್ಗೆ ಪ್ರಸ್ತಾವನೆ ಪಡೆದುಕೊಳ್ಳುತ್ತಿದ್ದರು. ಅನಂತರ ವಿವಿಧ ಸಂಘ-ಸಂಸ್ಥೆಗಳ ಜೊತೆ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸಿದ್ದರಾಮಯ್ಯ ಯಾವುದೇ ಪೂರ್ವಭಾವಿ ಸಭೆಗಳಲ್ಲಿ ತೊಡಗಿಸಿಕೊಳ್ಳದೆ ತಮ ಪಾಡಿಗೆ ತಾವೀದ್ದಾರೆ.

ಇತ್ತೀಚಿಗೆ ಕೇರಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಚರ್ಚೆ ನಡೆಸಿದ್ದರು. ಅದರ ನಡುವೆಯೂ ಸಿದ್ದರಾಮಯ್ಯ ಇನ್ನು ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭಿಸಿಲ್ಲ. ಈಗಾಗಲೇ 16 ಬಜೆಟ್‌ ಗಳನ್ನು ಮಂಡಿಸಿ 17ನೇ ಬಜೆಟ್‌ ಮೂಲಕ ಹೊಸ ದಾಖಲೆ ಬರೆಯಲು ಸಿದ್ದರಾಮಯ್ಯ ಮುಂದಾಗಿದ್ದರು. ಈ ಹಂತದಲ್ಲಿ ನಾಯಕತ್ವದ ಗೊಂದಲಗಳು ಪರಿಸ್ಥಿತಿಯನ್ನು ಅಯ್ಯೋಮಯ ಮಾಡಿವೆ.

ಮುಂದಿನ ಬಜೆಟ್‌ ಮಂಡಿಸುವವರು ಯಾರು ಎಂಬುದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಕಾಂಗ್ರೆಸ್‌‍ ನಾಯಕರ ಬಳಿಯು ಇದೇ ವಿಚಾರವಾಗಿ ಚರ್ಚೆಯಾಗುತ್ತಿದೆ. ಆದರೆ ಕಾಂಗ್ರೆಸ್‌‍ ಪಕ್ಷದಲ್ಲಿ ಯಾವುದೇ ನಿರ್ದಿಷ್ಟವಾದ ನಿರ್ಧಾರಗಳು ಇನ್ನೂ ಹೊರ ಬಿದ್ದಿಲ್ಲ. ಐದು ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಇತ್ತೀಚಿಗೆ ತಮ ನಿಲುವನ್ನು ಬದಲಾಯಿಸಿದ್ದಾರೆ. ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದರೆ ತಾವು ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ವರಸೆ ಬದಲಾಯಿಸಿದ್ದಾರೆ. ಎರಡು ಉಪಹಾರ ಕೂಟಗಳ ಬಳಿಕ ಡಿಕೆ ಶಿವಕುಮಾರ್‌ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಾಯಕತ್ವದ ವಿವಾದವನ್ನು ಹೈಕಮಾಂಡ್‌ ಸೃಷ್ಟಿಸಿಲ್ಲ. ರಾಜ್ಯ ನಾಯಕರು ತಮಷ್ಟಕ್ಕೆ ತಾವೇ ಗೊಂದಲ ಮಾಡಿಕೊಂಡಿದ್ದಾರೆ. ಈ ವಿವಾದವನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು. ಆ ಬಳಿಕ ಭುಗಿಲೆದ್ದಿದ್ದ ಚರ್ಚೆಗಳು ಸದ್ದಡಗಿದ್ದವು.

ನಾಯಕತ್ವದ ಗೊಂದಲ ನಿವಾರಣೆಯಾಗಿದೆ ಎಂದು ಭಾವಿಸುವ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್‌ ಹುಸೇನ್‌, ಡಿಸೆಂಬರ್‌ 6 ಅಥವಾ 9ರಂದು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುವುದು ನೂರಕ್ಕೆ ಇನ್ನೂರಷ್ಟು ಖಚಿತ ಎಂದು ಹೇಳುತ್ತಿದ್ದಾರೆ.

ಡಿ.ಕೆ.ಶಿವಕುಮಾರ್‌ ಬಣದ ಉತ್ಸಾಹ ನೋಡಿದರೆ ನಾಯಕತ್ವದ ಕುರಿತ ಗೊಂದಲಗಳ ಬಗ್ಗೆ ಮತ್ತಷ್ಟು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಬಜೆಟ್‌ ತಯಾರಿ ಮಾಡದೆ ತಟಸ್ಥವಾಗಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಆರ್ಥಿಕ ಇಲಾಖೆಯಲ್ಲಿ ಹೆಚ್ಚು ಅನುಭವಿಯಾಗಿರುವ ಸಿದ್ದರಾಮಯ್ಯ ಅವರು ಈ ಬಾರಿ ಎರಡು ತಿಂಗಳಿಗೂ ಮೊದಲೇ ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭಿಸುವ ಅಗತ್ಯ ಇಲ್ಲ ಎಂದು ಭಾವಿಸಿರುವ ಸಾಧ್ಯತೆಯೂ ಇದೆ. ಆದರೆ ನಾಯಕತ್ವದ ಗೊಂದಲ ವಿಚಾರವಾಗಿ ಹೈಕಮಾಂಡ್‌ ಸ್ಪಷ್ಟ ನಿರ್ದೇಶನ ನೀಡದೇ ಇರುವುದು ಅನುಮಾನಗಳನ್ನು ಹೆಚ್ಚಿಸಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ