ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಮುಂದುವರಿದಿರುವ ಬೆನ್ನಲ್ಲೇ, ಇದೀಗ ಅನ್ನಭಾಗ್ಯ ಯೋಜನೆಯಲ್ಲೂ ದೊಡ್ಡ ಬದಲಾವಣೆಯ ಸುಳಿವು ಸಿಕ್ಕಿದೆ. ರಾಜ್ಯದಲ್ಲಿ ಸುಮಾರು 13 ರಿಂದ 14 ಲಕ್ಷ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದ್ದು, ಅವರ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಸಜ್ಜಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅನ್ನಭಾಗ್ಯ ಯೋಜನೆಯ ಲಾಭ ನಿಜವಾದ ಬಡವರಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ ಹಲವರು ಅನರ್ಹರಾಗಿದ್ದರೂ ಬಿಪಿಎಲ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇಂತಹ ಕಾರ್ಡ್‌ಗಳನ್ನು ಗುರುತಿಸಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ" ಎಂದು ಹೇಳಿದರು.
ಈ ಹಿಂದೆ ಅನರ್ಹರು ಸ್ವಯಂಪ್ರೇರಿತವಾಗಿ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿತ್ತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಸರ್ಕಾರವೇ ಈಗ ಅನರ್ಹರ ಪಟ್ಟಿ ಸಿದ್ಧಪಡಿಸಿದೆ ಎನ್ನಲಾಗಿದೆ.
ಸಚಿವರ ಪ್ರಕಾರ, ಈಗಾಗಲೇ ಇಲಾಖೆಗೆ ಅನರ್ಹ ಫಲಾನುಭವಿಗಳ ಕುರಿತ ವರದಿ ಸಲ್ಲಿಕೆಯಾಗಿದ್ದು, ಅಂತಿಮ ಪರಿಶೀಲನೆಯ ಬಳಿಕ ಅಧಿಕೃತ ನಿರ್ಧಾರ ಪ್ರಕಟವಾಗಲಿದೆ. ಸರ್ಕಾರದ ಈ ಕ್ರಮದಿಂದ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದ್ದು, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಆಗುವ ನಿರೀಕ್ಷೆ ಮೂಡಿದೆ.
ನಿಜವಾದ ಬಡವರಿಗೆ ಮಾತ್ರ ಯೋಜನೆಯ ಸೌಲಭ್ಯ ತಲುಪಿಸುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುತ್ತಿರುವ ಈ ಕ್ರಮ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.