ಬೆಂಗಳೂರು: 'ರಾಸಲೀಲೆ' ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ತಲೆದಂಡವಾಗಿದೆ.
ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಕಾರಣ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಮಚಂದ್ರ ರಾವ್ ಅವರನ್ನು ತಡ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಅಮಾನತು ಅವಧಿಯಲ್ಲಿ, ರಾಮಚಂದ್ರ ರಾವ್, 1969 ರ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ನಿಯಮ -4 ರ ಪ್ರಕಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ. ಆದೇಶವು ಅವರ ಚಲನವಲನದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ. ಅಮಾನತು ಅವಧಿಯಲ್ಲಿ, ಅಧಿಕಾರಿಯು ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಸಂದರ್ಭಗಳಲ್ಲಿ ಪ್ರಧಾನ ಕಚೇರಿಯನ್ನು ತೊರೆಯುವಂತಿಲ್ಲ.
ರಾಸಲೀಲೆ ವಿಡಿಯೋ ವೈರಲ್ ಆದ ಪ್ರಕರಣದ ಹಿನ್ನೆಲೆಯೇನು ಎಂದು ನೋಡಲು ಹೋದರೇ, ಈ ವಿಡಿಯೋಗಳು ಡಿಜಿಪಿ ರಾಮಚಂದ್ರರಾವ್ ಅವರ ಕಚೇರಿಯಲ್ಲೇ ರಹಸ್ಯವಾಗಿ ಚಿತ್ರಿಕರಿಸಲಾಗದೆ.
ಪೊಲೀಸ್ ಸಮವಸ್ತ್ರದಲ್ಲೇ ಡಿಜಿಪಿ ರಾಮಚಂದ್ರರಾವ್ ಚೇರ್ ಮೇಲೆ ಕುಳಿತು ಮಹಿಳೆಯನ್ನು ಅಪ್ಪಿಕೊಂಡು ಸರಸ ನಡೆಸಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ. ಇದು ಅವರ ಪುತ್ರಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲು ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.
ಅತ್ತ ಮಗಳು ರನ್ಯಾರಾವ್ ಚಿನ್ನ ಕಳ್ಳಸಾಗಾಣಿಕೆ ಕೇಸ್‌ನಲ್ಲಿ ಸಿಕ್ಕಿ ಜೈಲುವಾಸ ಅನುಭವಿಸುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್ ಆಗಿರುವುದು ರಾಜ್ಯಾದ್ಯಂತ ಸದ್ದುಮಾಡುತ್ತಿದೆ.