LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Politics News

ಕಾಲ್ತುಳಿತ ಪ್ರಕರಣಕ್ಕೆ ಸಿಎಂ , ಡಿಸಿಎಂ , ಗೃಹ ಸಚಿವರೇ ಕಾರಣ !

ಸ್ಟೇಡಿಯಂ ಬಳಿ ಕಾಲ್ತುಳಿತ: 11 ಜನರ ಸಾವಿಗೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ
ಕನ್ನಡನಾಡು ಪ್ರತಿನಿಧಿಯಿಂದ
ಬಳ್ಳಾರಿ : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ `ಆರ್‍ಸಿಬಿ’ ವಿಜಯೋತ್ಸವ ಸಂಬಂಧ ನಡೆದ ನೂಕು ನುಗ್ಗಲು, ಕಾಲ್ತುಳಿತದಲ್ಲಿ 11 ಜನ ಅಮಾಯಕರು ಮೃತಪಟ್ಟ ದುರ್ಘಟನೆಗೆ ರಾಜ್ಯದ ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆಗಾರರಾಗಿದ್ದಾರೆ. ಈ ಘಟನೆಯು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದ್ದು, ಪೊಲೀಸ್ ಅಧಿಕಾರಿಗಳು ಈ ಮೂವರನ್ನು ಏ1, ಏ2, ಏ3 ಆರೋಪಿಗಳನ್ನಾಗಿ ಮಾಡಿ ಕೇಸ್ ದಾಖಲಿಸಿ, ಬಂಧಿಸಬೇಕು ಎಂದು ಬಿಜೆಪಿ ಹಿರಿಯ ಧುರೀಣ, ರಾಜ್ಯದ ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹ ಪಡಿಸಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಬೆಳಿಗ್ಗೆ ಮಾತನಾಡಿದ ಬಿ.ಶ್ರೀರಾಮುಲು ಅವರು, ರಾಜ್ಯ ಸರ್ಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಆದರೆ ಈ ದುರಂತಕ್ಕೆ ರಾಜ್ಯದ ಸಿಎಂ, ಡಿಸಿಎಂ, ಹೆಚ್‍ಎಂ (ಗೃಹ ಸಚಿವ) ಅವರೇ ಕಾರಣರಾಗಿದ್ದಾರೆ. ಸರ್ಕಾರದ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಮತ್ತು ಉಡಾಫೆಗಳಿಂದಾಗಿಯೇ ಕಾಲ್ತುಳಿತ ಸಂಭವಿಸಿ, 11 ಜನ `ಆರ್‍ಸಿಬಿ’ ಅಭಿಮಾನಿಗಳು ಅಕಾಲ ಮರಣವನ್ನಪ್ಪಿದ್ದಾರೆ. ಸಿಎಂ-ಡಿಸಿಎಂ-ಗೃಹ ಸಚಿವರು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
ರಾಜ್ಯ ಸರ್ಕಾರವು ಸಂಪೂರ್ಣ ನಿಷ್ಕ್ರಿಯವಾಗಿದೆ. ಐಟಿ-ಬಿಟಿ ಕಂಪನಿಗಳಲ್ಲಿನ ನೌಕರರು `ವರ್ಕ್ ಫ್ರಂ ಹೋಂ’ ಕೆಲಸ ಮಾಡುವ ರೀತಿ, ರಾಜ್ಯದ ಸಚಿವರ ಕೆಲಸ ನಡೀತಾ ಇದೆ. ಯಾರೊಬ್ಬರೂ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಜನರ ಬಳಿ ತೆರಳುತ್ತಿಲ್ಲ. ಈ ದುರಂತದಲ್ಲಿ ಮೃತಪಟ್ಟ 11 ಜನರ ಕುಟುಂಬಗಳಿಗೆ ಸಾಂತ್ವನ ಹೇಳಲಿಲ್ಲ, ಅಂತ್ಯ ಕ್ರಿಯೆಯಲ್ಲಿಯೂ ಭಾಗವಹಿಸಿಲ್ಲ. ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಲಿಲ್ಲ. ಇದೊಂದು ಲಜ್ಜೆಗೇಡಿ ಸರ್ಕಾರವಾಗಿದೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಕೋತಿಯು ಮೊಸರನ್ನು ತಿಂದು ಕುರಿ ಮೂತಿಗೆ ಒರೆಸುವಂತೆ `ರಾಜ್ಯ ಸರ್ಕಾರ’ ತನ್ನ ತಪ್ಪು, ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು, ಪೊಲೀಸ್ ಅಧಿಕಾರಿಗಳ ಮೇಲೆ, ಆರ್‍ಸಿಬಿ, ಕೆಎಸ್‍ಸಿಎ, ಡಿಎನ್‍ಎ ಸಂಸ್ಥೆಗಳ ಮೇಲೆ ದೋಷಾರೋಪ ಮಾಡುತ್ತಿದೆ. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ನೀಡಿದಂತಾಗಿದೆ ಇವರ ವೈಖರಿ ಎಂದು ವ್ಯಂಗ್ಯವಾಡಿದರು.
ಸಿಬಿಐಗೆ ವಹಿಸಿ: ನಿವೃತ್ತ ನ್ಯಾಯಾಧೀಶರಿಂದ , ಸಿಐಡಿಯಿಂದ ವಿಚಾರಣೆ ನಡೆಸಿ, ನಡೆದ `ದುರಂತ’ಕ್ಕೆ ತೇಪೆ ಹಚ್ಚುವ ವ್ಯರ್ಥ ಕಸರತ್ತು ಸರ್ಕಾರ ನಡೆಸಿದೆ. ಇವರಿಂದ ಸಮಗ್ರ ತನಿಖೆ ನಡೆಯುವುದೇ, ನ್ಯಾಯ ಸಿಕ್ಕುವುದೇ? ಈ ಸರ್ಕಾರಕ್ಕೆ ನಿಜವಾಗಿಯೂ ಜನರ ಪ್ರಾಣದ ಬಗ್ಗೆ ಕಿಂಚಿತ್ತಾದರೂ ಕಳಕಳಿ, ಕಾಳಜಿ ಇದ್ದರೆ ಈ ಘಟನೆಯ ತನಿಖೆಯ ಹೊಣೆಯನ್ನು `ಸಿಬಿಐ’ಗೆ ವಹಿಸಿ, ಆದೇಶ ನೀಡಲಿ ಎಂದು ಶ್ರೀರಾಮುಲು ಹಕ್ಕೊತ್ತಾಯ ಮಂಡಿಸಿದರು.
ಒಂದು ಕಡೆ ಅಮಾಯಕ ಜನರು ಸಾವನ್ನಪ್ಪುತ್ತಿದ್ದರೆ, ಡಿಸಿಎಂ ಡಿಕೆಶಿವಕುಮಾರ್ ಅವರು `ಕಪ್’ಗೆ ಮುತ್ತಿಕ್ಕುತ್ತಾ ಕ್ರಿಕೆಟ್ ಆಟಗಾರರೊಂದಿಗೆ `ಸೆಲ್ಪೀ’ ತೆಗೆಸಿಕೊಳ್ಳುತ್ತಾ ಸಂಭ್ರಮ ಪಡುತ್ತಿದ್ದುದು ನಿಜಕ್ಕೂ ಖಂಡನೀಯ. ಮೊನ್ನೆ ಐಪಿಎಲ್ ಕಪ್‍ಗೆ ಮುತ್ತು ನೀಡಿದ ಡಿಕೆಶಿಯವರು, ನಿನ್ನೆ ಜನರ ಸಾವಿಗೆ `ಕಣ್ಣೀರು’ ಸುರಿಸಿದ್ದಾರೆ. ಮೃತಪಟ್ಟವರ ಕುಟುಂಬಗಳ ಕಣ್ಣೀರು ಒರೆಸುವ, ಸಮಾಧಾನಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ, ಅಲ್ಲದೇ `ವಿಧಾನಸೌಧ’ದ ಮುಂದೆ ನಡೆದ ಕಾರ್ಯಕ್ರಮದಲ್ಲಿ `ಪ್ರೋಟೋಕಾಲ್’ ಉಲ್ಲಂಘನೆಯಾಗಿದೆ. ರಾಜ್ಯದ ಘನತೆವೆತ್ತ ರಾಜ್ಯಪಾಲರು 20 ನಿಮಿಷಕ್ಕೂ ಹೆಚ್ಚುಕಾಲ, ಕ್ರಿಕೆಟ್ ಆಟಗಾರರಿಗಾಗಿ ಕಾಯುವಂತೆ ಮಾಡಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದರು.
ಏ1, ಏ2, ಏ3ಯಾಗಿ ಮಾಡಿ: ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಮೊದಲ ಆರೋಪಿ `ಏ-1’ ಆಗಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಎರಡನೇ ಆರೋಪಿ `ಏ-2’ರನ್ನಾಗಿ ಹಾಗೂ ಗೃಹ ಸಚಿವ ಡಾ||ಜಿ.ಪರಮೇಶ್ವರ್ ಅವರನ್ನು ಮೂರನೇ ಆರೋಪಿ `ಏ-3’ ರನ್ನಾಗಿ ಮಾಡಿ, ಪೊಲೀಸರು ಎಫ್‍ಐಆರ್ ದಾಖಲಿಸಬೇಕು, ಸಿಎಂ-ಡಿಸಿಎಂ, ಹೆಚ್‍ಎಂರವರನ್ನು ಬಂಧಿಸಬೇಕು ಎಂದು ಶ್ರೀರಾಮುಲು ತಿಳಿಸಿದರು.
ಹೈದ್ರಾಬಾದ್‍ನಲ್ಲಿ ಪುಷ್ಪ-2 ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ, ಸಿನಿಮಾ ಥಿಯೇಟರ್ ಮುಂದೆ ಕಾಲ್ತುಳಿತದಿಂದಾಗಿ, ನಾಯಕ ನಟ ಅಲ್ಲು ಅರ್ಜುನ್‍ರನ್ನು ಆರೋಪಿಯನ್ನಾಗಿಸಿ, ಕೇಸ್ ದಾಖಲಿಸಿ, ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿನ ಕಾಂಗ್ರೆಸ್ ಸರ್ಕಾರವೇ ಈ ಕ್ರಮ ಕೈಗೊಂಡಿತ್ತು. ಇಲ್ಲಿ ಕೂಡಾ ಕಾಂಗ್ರೆಸ್ ಸರ್ಕಾರವಿದೆ. ಇಲ್ಲಿನ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಇಲ್ಲಿಯೂ ಈ ಘಟನೆಗೆ ಕಾರಣರಾಗಿರುವ ಸಿಎಂ- ಡಿಸಿಎಂರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಡಿಸಿಎಂ ಅವರ ಬಾಲಿಶ ವರ್ತನೆ, ರಾಜ್ಯ ಸರ್ಕಾರದ ತಪ್ಪಿನಿಂದಾಗಿ ಈ ಘೋರ ದುರಂತ ಸಂಭವಿಸಿದೆ. ಸಿಎಂ-ಡಿಸಿಎಂ ಅವರ ವೈಯುಕ್ತಿಕ ಪ್ರತಿಷ್ಠೆ, ಸ್ವಾರ್ಥ, ಪುಕ್ಕಟೆ ಪ್ರಚಾರದ `ಗೀಳಿ’ನಿಂದಾಗಿ ಮುಗ್ಧ ಜನರು ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರವು ಅತೀ ಶೀಘ್ರವೇ ವಿಧಾನ ಮಂಡಲದ ಜಂಟಿ ಅಧಿವೇಶನ ಕರೆದು, ಈ ದುರಂತದ ಬಗ್ಗೆ ಚರ್ಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಯನ್ನು ಬಹಿರಂಗ ಕ್ಷಮೆ ಯಾಚಿಸಬೇಕು. ಸರ್ಕಾರವು ಮೃತಪಟ್ಟವರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆಯ ಬಿಜೆಪಿ ಸದಸ್ಯರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ