ಬಳ್ಳಾರಿ: ನಿನ್ನೆಯಷ್ಟೇ ಹೊಸಪೇಟೆಯ ವಡ್ಡರಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 7 ಜನ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಈ ಹಿನ್ನೆಲೆಯಲ್ಲಿ ಇಂದು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಗೆ ಭೇಟಿ ನೀಡಿ ಗಾಯಾಳುಗಳು ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಗಾಯಾಳುಗಳಿಗೆ ಧೈರ್ಯ ಹೇಳಿದರಲ್ಲದೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನಿನ್ನೆ ಹೊಸಪೇಟೆ ರಸ್ತೆಯಲ್ಲಿ ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಈ ರಸ್ತೆ ಅಪಘಾತ ನಿಜಕ್ಕೂ ತುಂಬಾ ನೋವಿನ ಸಂಗತಿಯಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ತಲಾ 50 ಸಾವಿರ ರೂ. ಘೋಷಿಸಿದ್ದಾರೆ. ಸಿಎಂ ಬಳಿ ಚರ್ಚಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದರಲ್ಲದೆ, ಅಲ್ಪಸಂಖ್ಯಾತ ಇಲಾಖೆಯಿಂದ ಕೂಡ ತಲಾ ಒಂದು ಲಕ್ಷ ರೂ. ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಸಚಿವರ ಜೊತೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕೆಎಂಎಫ್ ಅಧ್ಯಕ್ಷ ಮಾಜಿ ಶಾಸಕ ಭೀಮಾ ನಾಯ್ಕ್, ಹೊಸಪೇಟೆ ಶಾಸಕ ಗವಿಯಪ್ಪ ಈ ವೇಳೆ ಹಾಜರಿದ್ದರು.