ಮಾಧ್ಯಮದಲ್ಲಿ ಬೆಳೆಯಲು ಬರವಣಿಗೆ ಜೊತೆಗೆ ತಾಂತ್ರಿಕತೆಯೂ ಅಗತ್ಯ

ಬಳ್ಳಾರಿ: ‘ಆಧುನಿಕ ಮಾಧ್ಯಮದಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಿದವರಿಗೆ ತೆರೆದ ತೋಳಿನ ಸ್ವಾಗತವಿದೆ’ ಅಂತೆಯೇ ಮಾಧ್ಯಮದಲ್ಲಿ ಬೆಳೆಯಬೇಕಾದರೆ ಬರವಣಿಗೆ ಜೊತೆಗೆ ತಾಂತ್ರಿಕತೆಯೂ ಅಗತ್ಯ ಎಂದು ಪ್ರಜಾವಾಣಿ ಪತ್ರಿಕೆಯ ಉಪಸಂಪಾದಕಿ ಕಲಾವತಿ ಬೈಚಬಾಳ ಹೇಳಿದರು.

 

 

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ( ಸ್ವಾಯತ್ತ)ನ ಪತ್ರಿಕೋದ್ಯಮ‌ ವಿಭಾಗದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ  ‘ಮಾಧ್ಯಮ ಕ್ಷೇತ್ರಗಳಲ್ಲಿ  ಇತ್ತೀಚಿನ ಪ್ರವೃತ್ತಿಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 

‘ಮಾಧ್ಯಮ ಕ್ಷೇತ್ರ ಸದಾ ಹೊಸದನ್ನು ಬಯಸುತ್ತದೆ. ಸೃಜನಾತ್ಮಕ ಬರವಣಿಗೆ ಜೊತೆಗೆ ಡಿಜಿಟಲ್ ಮಾಧ್ಯಮದ ಅಗತ್ಯತೆಗಳನ್ನು ಅರಿತು ನಿರೀಕ್ಷೆಗಳಿಗೆ ತಕ್ಕಂತೆ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ‘ಮಾಧ್ಯಮದಲ್ಲಿ ಮಹಿಳೆಯರ ಸಂಖ್ಯೆ ದಿನೆದಿನೇ ಕುಸಿಯುತ್ತಿದೆ. ವಿದ್ಯಾರ್ಥಿಗಳು ಇದನ್ನೇ ಸವಾಲಾಗಿಟ್ಟುಕೊಂಡು ಅವಕಾಶಗಳತ್ತ ದಾಪುಗಾಲಿಡಬೇಕು. ವೃತ್ತಿಯಲ್ಲಿ ಎದುರಾಗಬಹುದಾದ ಸವಾಲುಗಳಿಗೂ ಮಾನಸಿಕವಾಗಿ ಸಿದ್ಧರಾಗಬೇಕು’  ಎಂದು ಸಲಹೆ‌ ನೀಡಿದರು. ‘ ಜೀವನದಲ್ಲಿ ಕಲಿಕಾ ಹಂಬಲ ಇರಬೇಕು. ಬಹುಮುಖ ಪ್ರತಿಭೆಗಳಾಗಿದ್ದಾಗ ಮಾತ್ರ ಮಾಧ್ಯಮ‌ಮನೆಗಳು‌ ಉದ್ಯೋಗಾವಕಾಶ ನೀಡುತ್ತವೆ’ ಎಂದು ಹೇಳಿದರು. ‘ಸುದ್ದಿ, ಮಾಹಿತಿಯ ಮಹಾಪೂರದಲ್ಲಿ ವಿಶ್ವಾಸಾರ್ಹತೆ ಮತ್ತು ವಾಸ್ತವ ವರದಿಗೆ ವರದಿಗಾರರು ಹೆಚ್ಚಿನ ಒತ್ತು ನೀಡಬೇಕು’ ಎಂದು ತಿಳಿಸಿದರು. 

‘ಪತ್ರಿಕೋದ್ಯಮ, ಫಿಲ್ಮೋಗ್ರಫರ್, ಫೋಟೋಗ್ರಾಫರ, ಗ್ರಾಫಿಕ್ ಡಿಸೈನ್, ಮಿಡಿಯಾ ಮಾರ್ಕೆಟಿಂಗ್ ಮತ್ತು ಜಾಹೀರಾತು, ಡಿಜಿಟಲ್ ಮಾಧ್ಯಮದಲ್ಲಿ ಹೇರಳ ಅವಕಾಶಗಳಿವೆ. ಸಂವಹನ ಕೌಶಲದ ಜೊತೆಗೆ ಪ್ರತಿಯೊಂದು ವಿಚಾರವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಹಾಗೂ ಕ್ರಿಯಾಶೀಲವಾಗಿ ಯೋಚಿಸುವ ಮನಸ್ಥಿತಿ ಅಗತ್ಯ’ ಎಂದರು. ‘ಪ್ರಕಾಶನ ಕ್ಷೇತ್ರದಲ್ಲಿ ಉದ್ಯೋಗ ಭವಿಷ್ಯ ಹುಡುಕುವವರಿಗೆ ಪಬ್ಲಿಷಿಂಗ್ ಮತ್ತು ಎಡಿಟಿಂಗ್ ನಲ್ಲಿ ಸ್ಪೆಷಲೈಜೇಷನ್ ಮಾಡ ಬಹುದು. ನಿಯತಕಾಲಿಕೆ, ಪುಸ್ತಕಗಳನ್ನು ಪ್ರಕಟಿಸಬಹುದು. ಗ್ರಾಫಿಕ್ಸ್ ಡಿಸೈನಿಂಗ್, ಕಾಪಿ ಎಡಿಟಿಂಗ್ ಮತ್ತು ಕಾನೂನು ವಿಷಯಗಳ ಬಗ್ಗೆ ಮಾಹಿತಿ ಅಗತ್ಯ’ ಎಂದು ವಿವರಿಸಿದರು. 

ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.‌ಹೊನ್ನೂರಾಲಿ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೈ.‌ ಜನಾರ್ಧನ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಚ್.ಕೆ. ಮಂಜುನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

 

 

ಪತ್ರಿಕೋದ್ಯಮ ವಿಭಾಗದ ಅತಿಥಿ‌ ಉಪನ್ಯಾಸಕರಾದ ಗಿರೀಶ ಕುಮಾರಗೌಡ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಅವಕಾಶಗಳಿದ್ದು, ಪ್ರಾಯೋಗಿಕ ಜ್ಞಾನಕ್ಕಾಗಿ ಅಗತ್ಯ ಸ್ಟುಡಿಯೋ ವ್ಯವಸ್ಥೆ ಕಲ್ಪಿಸಲು ಕಾಲೇಜು ಆಡಾಲಿತ ಮಂಡಳಿ, ಜಿಲ್ಲಾಡಳಿತ ನೆರವು ನೀಡಬೇಕು. ರಾಜ್ಯ ಸರ್ಕಾರವು ಪದವಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ‌ ವಿಭಾಗಕ್ಕೆ ಕಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. 

ವೇದಿಕೆಯ ಮೇಲೆ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶೈಲಜಾ, ಡಾ.ವೈ ಜನಾರ್ದನ ರೆಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತ್ ಗಿರಿದಿನ್ನಿ, ಪತ್ರಿಕೋದ್ಯಮ ವಿಭಾಗದ ಟಿ.ಜಯರಾಮ್ ಉಪಸ್ಥಿತರಿದ್ದರು. ಸುಮ ಮತ್ತು ತಂಡದವರು ಪ್ರಾರ್ಥಿಸಿದರು. ಎಸ್. ಸಂಜನಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಡಿ. ಎನ್. ಮಹೇಶ್ ಸ್ವಾಗತಿಸಿದರು. 

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top