ಸದಸ್ಯರು ಸದನದಕ್ಕೆ ಪೋಸ್ಟರ್ ತರಬಾರದು ಹಾಗೂ ಪ್ರದರ್ಶಿಸಬಾರದು

ಬೆಂಗಳೂರು : ಸದಸ್ಯರು ಸದನದಕ್ಕೆ ಪೋಸ್ಟರ್ ತರಬಾರದು ಹಾಗೂ ಪ್ರದರ್ಶಿಸಬಾರದು. ಸದನವನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿಂದು ಖಡಕ್ಕಾಗಿ ಹೇಳಿದರು. ಸದನ ಸಮಾವೇಶಗೊಂಡಾಗ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಪೋಸ್ಟರ್ ಒಂದನ್ನು ಪ್ರದರ್ಶಿಸಿ, ನಮ್ಮ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಯಾಗಿದ್ದು, ಆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಕೋರಲು ಮುಂದಾದರು. ಆಗ ಸಭಾಧ್ಯಕ್ಷರು, ಪೋಸ್ಟರ್ ಸದನಕ್ಕೆ ತರುವುದು ಸರಿಯಲ್ಲ, ಇದರಿಂದ ನಿಮಗೆ ಪ್ರಚಾರ ಸಿಕ್ಕರೂ ಮತ ಸಿಗುವುದಿಲ್ಲ. ಲಿಖಿತವಾಗಿ ನೋಟಿಸ್ ಕೊಟ್ಟರೆ ಚರ್ಚೆಗೆ ಅವಕಾಶ ಕೊಡಲಾಗುವುದು. ನೀವು ಶೂನ್ಯವೇಳೆಯನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದರು.

ಕಲಾಪ ಆರಂಭವಾಗುತ್ತಿದ್ದಂತಯೇ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್ಗೆ ಸ್ಪೀಕರ್ ಯುಟಿ ಖಾದರ್ ಹೀಗೆ ತರಾಟೆಗೆ ತೆಗೆದುಕೊಂಡರು. ಭಿತ್ತಿ ಪತ್ರ ತೆಗೆದುಕೊಂಡು ಸದನದಲ್ಲಿ ಹಾಜರಾಗಿದ್ದ ಶರಣಗೌಡ ಕಂದಕೂರ್ ಅವರನ್ನು ನೋಡುತ್ತಿದ್ದಂತೆ, ಮತ ಪಡೆಯುವ ಲೆಕ್ಕಾಚಾರ, ಬಿಟ್ಟಿ ಪ್ರಚಾರ ಪಡೆಯುವ ಲೆಕ್ಕಾಚಾರ ಹಾಕಿಕೊಂಡು ಈ ರೀತಿ ಭಿತ್ತಿಪತ್ರ ಸದನದಲ್ಲಿ ತೋರಿಸುವ ಅವಶ್ಯಕತೆ ಇಲ್ಲ, ನಾನು ಕೂಡಾ ಶಾಸಕ ಆಗಿ ಬಂದವನು ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಂಡರು. ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಮಾತಿಗೆ ಲಘು ಆಕ್ಷೇಪ ವ್ಯಕ್ತಪಡಿಸಿದರು. 

ಬಿತ್ತಿಪತ್ರ ಪ್ರದರ್ಶಿಸಬಾರದು ಎಂಬುದಕ್ಕೆ ಬಿಜೆಪಿ ಹಿರಿಯ ಸದಸ್ಯರಾದ ಸಿ.ಸಿ.ಪಾಟೀಲ್, ಅಶ್ವತ್ಥನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿ, ನೀವು ಶಾಸಕರಾಗಿದ್ದಾಗ ನೀವು ಪ್ರದರ್ಶಿಸಿಲ್ಲವೆ ಎಂದರು. ಆಗ ಸಭಾಧ್ಯಕ್ಷರು ಹಿಂದಿನ ಸಭಾಧ್ಯಕ್ಷರು ಕೂಡ ಇದೇ ರೀತಿಯ ಸೂಚನೆ ಕೊಟ್ಟಿದ್ದರು. ಅದನ್ನು ತಾವು ಪಾಲಿಸಿದ್ದಾಗಿ ತಿಳಿಸಿ ಸಂತಾಪ ಸೂಚನೆ ಕಲಾಪ ಕೈಗೆತ್ತಿಕೊಂಡರು.

ಸಂತಾಪ ಸೂಚನೆ ಮುಗಿದ ಬಳಿಕ ಶರಣಗೌಡ ಕಂದಕೂರ್ ಮತ್ತೆ ಪೋಸ್ಟರ್ ಪ್ರದರ್ಶಿಸಿ ನಮ್ಮ ಜಿಲ್ಲೆಯಲ್ಲಿನ ರೈತರ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಬೇಕು. ನಮ್ಮ ದನಿ ಅಡಗಿಸಬಾರದು. ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆಗ ಸಭಾಧ್ಯಕ್ಷರು, ಶೂನ್ಯವೇಳೆಯಲ್ಲಿ ನೋಟಿಸ್ ನೀಡಿ ಪ್ರಸ್ತಾಪಿಸಬಹುದು. ನೀವು ಲಿಖಿತ ನೋಟಿಸ್ ಕೊಟ್ಟ ನಂತರ ಪರಿಗಣಿಸುವುದಾಗಿ ತಿಳಿಸಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top