ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಶ್ಯಾಡೋ ಸಿಎಂ ಎಂದು ವ್ಯಂಗ್ಯವಾಡಿರುವ ಬಿಜೆಪಿ, ಯತೀಂದ್ರ ಅವರ ಅತಿಯಾದ ಹಸ್ತಕ್ಷೇಪದಿಂದ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಈಗಾಗಲೇ ಆಂತರಿಕ ಸಂಘರ್ಷ ಶುರುವಾಗಿದೆ ಎಂದು ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಎಟಿಎಂ ಸರ್ಕಾರದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರರ ಅತಿಯಾದ ಹಸ್ತಕ್ಷೇಪದಿಂದ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಈಗಾಗಲೇ ಆಂತರಿಕ ಸಂಘರ್ಷ ಆರಂಭವಾಗಿದೆ. ಸಿದ್ದರಾಮಯ್ಯರವರು ಅಂತಿಮಗೊಳಿಸಿ ನೇಮಿಸಿದ ಅಧಿಕಾರಿಗಳಿಗೆ, ಸಂಬಂಧಪಟ್ಟ ಸಚಿವರು ಅಧಿಕಾರ ಸ್ವೀಕರಿಸಲು ಬಿಡದೇ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾರೆಂದು ಆರೋಪ ಮಾಡಿದೆ.
ಅವಮಾನಗೊಂಡ ಅಧಿಕಾರಿಗಳು ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸಚಿವರ ವಿರುದ್ಧ ದೂರು ನೀಡುತ್ತಿದ್ದು, ಕಾರ್ಯಾಂಗ ಮತ್ತು ಸಚಿವಾಂಗದ ಮಧ್ಯೆ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಸಿಎಂ ಆಪ್ತ ಬಣ ಹಾಗೂ ಸಿಎಂ ವಿರೋಧಿ ಬಣದ ಹಗ್ಗ ಜಗ್ಗಾಟದಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದೆ.
ಸಿಎಂ ಮತ್ತು ಶ್ಯಾಡೋ ಸಿಎಂ ಅವರೇ ವರ್ಗಾವಣೆ ದಂಧೆಯನ್ನು ಕೈಗೆತ್ತಿಕೊಂಡಿರುವುದರಿಂದ ಸಚಿವರ ಜೇಬುಗಳು ತುಂಬುತಿಲ್ಲ. ಹೀಗಾಗಿ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ರಕ್ಷಿಸಿಕೊಳ್ಳಲು ಈಗ ಸಚಿವರ ಜೇಬನ್ನು ಸಹ ತುಂಬಿಸಬೇಕಾಗಿದೆ. ರಾಜ್ಯದ ಜನರ ಹಿತ ಕಾಯುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರ ಪಡೆದ ಕಾಂಗ್ರೆಸ್, ಈಗ ವರ್ಗಾವಣೆ ದಂಧೆಯಿಂದ ಕರ್ನಾಟಕದಲ್ಲಿ ಭರ್ಜರಿ ಲೂಟಿಗಿಳಿದಿದೆ ಎಂದು ಆರೋಪಿಸಿದೆ.
ಇದೇ ವೇಳೆ ಬೆಲೆ ಏರಿಕೆ ವಿಚಾರವಾಗಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಪತ್ರಿಕೆ ತೆರೆದರೂ ಬೆಲೆ ಏರಿಕೆಯ ಸುದ್ದಿ ಖಾಯಂ. ನಿತ್ಯ ಹೊಸ ದಾಖಲೆ ಬರೆಯುತ್ತಿರುವ ಬೆಲೆಗಳು ಜನಸಾಮಾನ್ಯರ ಬದುಕು ಹೈರಾಣು ಮಾಡುತ್ತಿದೆ. ಅತ್ತ ವ್ಯಾಪಾರಿಗಳದ್ದೂ ಸರಕು ಕೊಂಡು ಮಾರಲಾಗದ ಸ್ಥಿತಿ, ಮಕ್ಕಳ ಬಿಸಿಯೂಟಕ್ಕೆ ತಿಳಿಸಾರೇ ಗತಿ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಮಾತ್ರ ಖಾಸಗಿ ಹೋಟೆಲ್‌ನಲ್ಲಿ ಕಲೆಕ್ಷನ್ ಏಜೆಂಟ್ ಜತೆ ಸಭೆ ಮಾಡುವಷ್ಟಕ್ಕೆ ಆಡಳಿತವನ್ನು ಸೀಮಿತಗೊಳಿಸಿದೆ ಎಂದು