ಬೆಂಗಳೂರು: ಪೌರ ಕಾರ್ಮಿಕರು ಮತ್ತು ಸಾಮಾಜಿಕ ನ್ಯಾಯದ ಪರ ಹೋರಾಟಗಾರ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ವಿಜಯಕುಮಾರ್ ಸಿಂಹ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕು ಎಂದು ವಿವಿಧ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಎನ್. ವಿಜಯ ಕುಮಾರ್ ಸಿಂಹ ಅವರು ಕೆ.ಪಿ.ಸಿ.ಸಿ.ಸಂಯೋಜಕರು, ಪೌರ ಕಾರ್ಮಿಕರ ಪರ ಹೋರಾಟಗಾರಾಗಿದ್ದು, ಶೋಷಿತ ಸಮುದಾಯಕ್ಕೆ ಈ ಬಾರಿ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಪೌರ ಕಾರ್ಮಿಕರ ಮತ್ತು 4ನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಎನ್.ನಾರಾಯಣ, ಕರ್ನಾಟಕ ಆದಿ ಜಾಂಬವ ಸಂಘದ ಕಾರ್ಯಧ್ಯಕ್ಷ ಸಿದ್ದರಾಜು, ಕರ್ನಾಟಕ ಸಹಾಯಕಾರಾಮಾಚಾರಿ ಪರಿಷತ್ ಉಪಾಧ್ಯಕ್ಷ ಜೈ ಪ್ರಕಾಶ್, ಕರ್ನಾಟಕ ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ಎಂ.ಎನ್.ಗೋಪಾಲ್, ಬಿಬಿಎಂಪಿ ನಿವೃತ್ತಿ ಪೌರಕಾರ್ಮಿಕರು, ಅವಲಂಬಿತರ ಸಂಘದ ಅಧ್ಯಕ್ಷ ಗಂಗಾಧರ್ ಹಾಗೂ ಸಫಾಯಿ ಕರ್ಮಚಾರಿ ಮಹಾ ಸಂಘದ ಉಪಾಧ್ಯಕ್ಷ ಗುಂಡಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.
ಐಡಿಪಿ ಸಾಲಪ್ಪ ನಂತರ ಬೆಂಗಳೂರಿನಲ್ಲಿ ದಲಿತ ಸಮುದಾಯಕ್ಕೆ ಸೇರಿದವರಿಗೆ ಮೇಲ್ಮನೆಯಲ್ಲಿ ಅವಕಾಶ ದೊರೆತಿಲ್ಲ. ವಿಜಯಕುಮಾರ್ ಸಿಂಹ 35 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದು, ಇವರ ಜನಪರ, ದಲಿತಪರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯೆ ನೀಡಬೇಕು ಎಂದರು.
ಎನ್ ವಿಜಯಕುಮಾರ್ ಸಿಂಹ ಅವರು ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದು, ಬೆಂಗಳೂರು ವಿವಿ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಕೆಲಸಮಾಡಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಜನಪರ ಹೋರಾಟ ಮಾಡುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಪರಿಶಿಷ್ಟರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಪೌರ ಕಾರ್ಮಿಕರ ವಸತಿ ಸೌಲಭ್ಯ, ನೇರ ನೇಮಕಾತಿ, ಖಾತೆಗಳಿಗೆ ನೇರವಾಗಿ ವೇತನ ದೊರೆಯಲು ಕಾರಣಕರ್ತರಾಗಿದ್ದಾರೆ. ಬೆಂಗಳೂರಿನಲ್ಲಿ ಪರಿಶಿಷ್ಟ ಸಮುದಾಯ 10ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಇವರನ್ನು ನಾಮನಿರ್ದೇಶನ ಮಾಡಿದರೆ ಮುಂಬರುವ ಬಿಬಿಎಂಪಿ ಚುನಾವಣೆಗೆ ಅನುಕೂಲವಾಗಲಿದೆ ಎಂದರು.