ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರುಗಳ ಮಾಧ್ಯಮ ಪ್ರತಿಕ್ರಿಯೆ

ಬೆಂಗಳೂರು: ಇಂದು ಪಕ್ಷದ ನೂತನ ಪದಾಧಿಕಾರಿಗಳ ಸಭೆ ಮಾಡಿದ್ದು, ಇದೊಂದು ಫಲದಾಯಕ ಚರ್ಚೆ ಮಾಡಲಾಗಿದೆ. ನಾವಿಂದು ಇಡೀ ರಾಷ್ಟ್ರವನ್ನೇ ಬಾಧಿಸುತ್ತಿರುವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಎತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಮೋದಿ ಅವರು ಇಂದು ರಾಜಸ್ಥಾನ, ಛತ್ತೀಸ್ ಗಡ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಜಾರ್ಖಂಡ್ ನ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆಗಿನ ಮೈತ್ರಿ ಪಕ್ಷಗಳ ಸರ್ಕಾರಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.

ನಾವು ಟೀಕೆ ಮಾಡುತ್ತಿಲ್ಲ, ಭಾರತ ಸರ್ಕಾರ ಅಬಕಾರಿ ಸುಂಕ ಇಳಿಸಿದ್ದು, ಹೀಗಾಗಿ ಈ ರಾಜ್ಯ ಸರ್ಕಾರಗಳು ಅಬಕಾರಿ ಸುಂಕ ಇಳಿಸಬೇಕು ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಾವು ಪ್ರಧಾನಮಂತ್ರಿಗಳಿಗೆ ಐದು ಸರಳ ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಮೋದಿ ಅವರೇ ಈ ಪ್ರಶ್ನೆಗಳಿಗೆ ಯಾವುದೇ ಟೀಕೆ, ವಿಷಯಾಂತರ ಹಾಗೂ ಸುಳ್ಳುಗಳನ್ನು ಹೇಳದೇ ನೇರ ಉತ್ತರ ನೀಡಿ.

  1. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.48 ರೂ. ಇತ್ತು. ಅದನ್ನು ನೀವು 28 ರೂ.ಗೆ ಏರಿಕೆ ಮಾಡಿದ್ದೀರಿ. ಈ ಅಬಕಾರಿ ಸುಂಕವನ್ನು ನೀವು 18 ರೂ.ನಷ್ಟು ಕಡಿಮೆ ಮಾಡಿ ಹಳೇಯ ಪ್ರಮಾಣಕ್ಕೆ ಯಾವಾಗ ಇಳಿಸುತ್ತೀರಿ? ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಡೀಸೆಲ್ ಮೇಲಿನ ಅಬಕಾರಿ ಸುಂಕ 3.56 ರೂ. ಇತ್ತು. ಮೋದಿ ಅವರೇ ಇದನ್ನು ನೀವು 21.80 ರೂ.ಗೆ ಏರಿಕೆ ಮಾಡಿದ್ದೀರಿ. ಇದನ್ನು ನೀವು ಯಾವಾಗ ಹಿಂಪಡೆಯುತ್ತೀರಿ? 18.24 ರೂ.ನಷ್ಟು ಅಬಕಾರಿ ಸುಂಕ ಕಡಿತಗೊಳಿಸುವುದು ಯಾವಾಗ?
  2. ಕಳೆದ 8 ವರ್ಷಗಳಲ್ಲಿ ದೇಶದಲ್ಲಿನ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 27 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಈ ಹಣವನ್ನು ದೇಶದ ಜನ ಸಾಮಾನ್ಯರಿಗೆ ಪರಿಹಾರವಾಗಿ ಯಾವಾಗ ಹಿಂತಿರುಗಿಸುತ್ತೀರಿ?
  3. 2014ರಲ್ಲಿ ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ರೂ. ಇತ್ತು. ಇದನ್ನು ನೀವು 1000 ರೂ.ಗೆ ಏರಿಸಿದ್ದೀರಿ. ಇದರ ಬೆಲೆ ಏರಿಕೆಯನ್ನು ನೀವು ಯಾವಾಗ ಹಿಂಪಡೆಯುತ್ತೀರಿ, ಜನರ ಹೊರೆ ಇಳಿಸುತ್ತೀರಿ?
  4. ಮನಮೋಹನ್ ಸಿಂಗ್ ಅವರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ವಾರ್ಷಿಕವಾಗಿ 1.50 ಲಕ್ಷ ಕೋಟಿ ಸಬ್ಸಿಡಿಯನ್ನು ನೀಡುತ್ತಿತ್ತು. ಮೋದಿ ಅವರೇ ನೀವು ಈ ಸಬ್ಸಿಡಿಯನ್ನು ರದ್ದು ಮಾಡಿದ್ದು, ಅದನ್ನು ಮತ್ತೆ ಯಾವಾಗ ನೀಡುತ್ತೀರಿ?
  5. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಹಿಮಾಚಲ, ಅಸ್ಸಾಂ, ಉತ್ತರಾಖಂಡ ರಾಜ್ಯಗಳಲ್ಲಿ ರಾಜ್ಯ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಯಾವಾಗ ಸೂಚನೆ ನೀಡುತ್ತೀರಿ?

ಈ ವಿಚಾರದಲ್ಲಿ ಒಬ್ಬರ ಮೇಲೊಬ್ಬರು ಟೀಕೆ ಮಾಡುವ ಬದಲು ನಾವೆಲ್ಲರೂ ಪರಸ್ಪರ ಕೈಜೋಡಿಸಿ ಜನರಿಗೆ ನರವಾಗಬೇಕು. ನೀವು ಇದರಲ್ಲಿ ಮಾಡಿಕೊಂಡಿರುವ 27 ಲಕ್ಷ ಕೋಟಿ ಆದಾಯ ಜನರ ನೆರವಿಗೆ ಹಂಚಿ. ನಾವು ಕೂಡ ರಾಜಸ್ಥಾನ ಛತ್ತೀಸ ಗಡ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸುಂಕವನ್ನು ಕಡಿತಗೊಳಿಸಿ ಸಹಕಾರ ನೀಡುತ್ತೇವೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ:

ಮೋದಿ ಅವರು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈಗಾಗಲೇ ಅವರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲೆ ಸಾಕಷ್ಟು ಅಬಕಾರಿ ಸುಂಕ ವಿಧಿಸಿದ್ದು, ಕಳೆದ 8 ವರ್ಷಗಳಲ್ಲಿ 27 ಲಕ್ಷ ಕೋಟಿ ಹಣ ಸಂಪಾದಿಸಿದ್ದಾರೆ. ಆ ಹಣದಲ್ಲಿ ಅರ್ಧದಷ್ಟು ಹಣವನ್ನು ಜನರಿಗೆ ಸಬ್ಸಿಡಿ ರೂಪದಲ್ಲಿ ನೀಡಿದರೆ ಜನರಿಗೆ ಹೊರೆ ಇಳಿಯಲಿದೆ. ಕೇಂದ್ರ ಸರ್ಕಾರವು ಇಂಧನ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡದೇ, ಬಿಜೆಪಿ ಹೊರತಾದ ಪಕ್ಷಗಳು ಅದಿಕಾರದಲ್ಲಿರುವ ರಾಜ್ಯಗಳಿಗೆ ಅಬಕಾರಿ ಸುಂಕ ಕಡಿತ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಅಬಕಾರಿ ಸುಂಕ ಕಡಿತ ಮಾಡುತ್ತಿಲ್ಲ.

ಮನಮೋಹನ್ ಸಿಂಗ್ ಅವರ ಸರ್ಕಾರ ಪ್ರತಿ ವರ್ಷ 1.30 ಲಕ್ಷ ಕೋಟಿ ಕೋಟಿ ಸಬ್ಸಿಡಿ ನೀಡಿ ಇಂಧನ ತೈಲ ದರ ನಿಯಂತ್ರಣ ಮಾಡುತ್ತಿದ್ದರು. ಬಡವರ ಮೇಲೆ ಹಣಕಾಸಿನ ಹೊರೆ ಬೀಳಬಾರದು ಎಂದು ಆಹಾರದಿಂದ ಎಲ್ಲ ವಸ್ತುಗಳ ಮೇಲೆ ಸಬ್ಸಿಡಿ ನೀಡುತ್ತಿದ್ದರು. ಆದರೆ ಮೋದಿ ಅವರಿಗೆ ಈ ಬುದ್ಧಿ ಯಾಕೆ ಬರುತ್ತಿಲ್ಲ. ಅವರು ನಮಗೆ ಸಲಹೆ ನೀಡುವ ಬದಲು, ಕರ್ನಾಟಕ, ಯುಪಿ, ಬಿಹಾರ ಸೇರಿದಂತೆ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆಯೋ ಆ ರಾಜ್ಯಗಳಲ್ಲಿ ಅವರು ಇಂಧನ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ತೋರಿಸಲಿ. ನಂತರ ಬೇರೆ ರಾಜ್ಯಗಳಿಗೆ ಹೇಳಲಿ.ಎಲ್ಲರು ಸೇರಿ ದೇಶವನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು, ಬಡವರು, ರೈತರ ಮೇಲೆ ಹೊರೆ ಹಾಕುವ ಪ್ರಯತ್ನಕ್ಕೆ ತಕ್ಕ ಶಿಕ್ಷೆ ಆಗಬೇಕು. ಜನ ಇವರಿಗೆ ತಕ್ಕ ಪಾಠ ಕಲಿಸಬೇಕು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಬಡವರು, ರೈತರಿಂದ ಯದ್ವಾತದ್ವ ತೆರಿಗೆ ವಸೂಲಿ ಮಾಡುತ್ತಿರುವ ವಿಚಾರವನ್ನು ನಮ್ಮ ನಾಯಕರು ಪ್ರಸ್ತಾಪಿಸಿದ್ದಾರೆ. ನಾನು ಆ ಬಗ್ಗೆ ಮಾತನಾಡುವುದಿಲ್ಲ.ಇಂದು ರಾಜ್ಯ ಪ್ರದೇಶ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳ ಸಭೆ ಮಾಡಿದ್ದು, ಆ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ ಅವರ ಜವಾಬ್ದಾರಿ ತಿಳಿಸಿದ್ದೇವೆ. ಚುನಾವಣೆಗೆ ಸಮಯ ವರ್ಷಕ್ಕಿಂತ ಕಡಿಮೆ ಇದ್ದು, ಎಲ್ಲ ಪದಾಧಿಕಾರಿಗಳು ಎಲ್ಲರೂ 24/7 ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಇಂದು ಈ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಬೆಲೆ ಏರಿಕೆ ಆಗುತ್ತಿದೆ.

ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರರ ಸಂಘದವರು 40% ಲಂಚದ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರಬರೆದು ದೂರು ನೀಡಿದ್ದಾರೆ. ಪತ್ರ ಬರಂದು 10 ತಿಂಗಳಾದರೂ ಪ್ರಧಾನಿಗಳು ಇಂದಿನವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು, ತನಿಖೆ ಮಾಡುವುದಿರಲಿ ಮಾಡಿಲ್ಲ. ಪ್ರಧಾನಿಗಳು ತಮ್ಮನ್ನು ತಾವು ಕಾವಲುಗಾರ ಎಂದು ಹೇಳಿಕೊಂಡಿದ್ದು, ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಮೌಲವಾಗಿರುವುದು ನೋಡಿದರೆ ಇವರ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕು ಇರುವ ಅನುಮಾನ ವ್ಯಕ್ತವಾಗುತ್ತದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಈಶ್ವರಪ್ಪನವರ ಕಮಿಷನ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಅವರ ಹೆಸರು ಬರೆದು ಸತ್ತಿದ್ದಾರೆ. ಇನ್ನು ಹಿಂದೆ ಅಬಕಾರಿ ಸಚಿವರಾಗಿದ್ದನಾಗೇಶ್ ಅವರು ಭ್ರಷ್ಟಾಚಾರಕ್ಕೆ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ, ಮತ್ತೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದು, ಹಿಂದುತ್ವದ ಬಗ್ಗೆ, ಅಲ್ಪಸಂಖ್ಯಾತರ ವಿರುದ್ದ ಮಾತನಾಡುತ್ತಿದ್ದ ಈಶ್ವರಪ್ಪ ಈಗ ಭ್ರಷ್ಟ್ಚಾರ ಮಾಡಿ ಸಿಲುಕಿದ್ದಾರೆ. ಇನ್ನು ಐದಾರು ಸಚಿವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದವರು ತಿಳಿಸಿದ್ದಾರೆ. ಈ ಭ್ರಷ್ಟ ಸಚಿವರ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ನಾನು ಗುತ್ತಿಗೆದಾರರ ಸಂಘಕ್ಕೆ ಒತ್ತಾಯಿಸುತ್ತೇನೆ. ಇವರ ಸುಳ್ಳು, ಭ್ರಷ್ಟಾಚಾರವನ್ನು ಜನರಿಗೆ ತಲುಪಿಸಬೇಕು.

ಇವರ ವೈಫಲ್ಯ, ನಮ್ಮ ಸಾಧನೆ ಜನರ ಮುಂದೆ ಇಡುವ ಕೆಲಸ ಆಗಬೇಕು. ನಮ್ಮ ಸರ್ಕಾರ ಇದ್ದಾಗ ಭಾಗ್ಯಗಳ ಸರ್ಕಾರ ಇತ್ತು, ಇಂದು ದೌರ್ಭಾಗ್ಯಗಳ ಸರ್ಕಾರ ಅಧಿಕಾರದಲ್ಲಿದೆ.ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರು ತಲೆಮರೆಸಿಕೊಂಡು 15 ದಿನವಾದರೂ ಇನ್ನು ಬಂಧಿಸಲಾಗಿಲ್ಲ. ಅವರಿಗೆ ಪೊಲೀಸ್ ಹಾಗೂ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಹೀಗಾಗಿ ಬಂಧಿಸಿಲ್ಲ. ಅವರಿಗೆ ಜಾಮೀನು ಸಿಗಲಿ ಎಂದು ಕಾಯುತ್ತಿದ್ದಾರೆ. ಹೀಗೆ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿ, ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಕೋಮು ಸಾಮರಸ್ಯ ಹಾಳು ಮಾಡಿದವರನ್ನು ರಕ್ಷಣೆ ಮಾಡುತ್ತಿದೆ.

ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆಯಾದಾಗ ಸೆಕ್ಷನ್ 144 ಉಲ್ಲಂಘಿಸಿ ಶವಯಾತ್ರೆ ಮಾಡುತ್ತಾರೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆಳಂದದಲ್ಲಿ ಕೇಂದ್ರ ಸಚಿವ ಕೂಬಾ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದಾರೆ. ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಮೇಕೆದಾಟು ಪಾದಯಾತ್ರೆ ಮಾಡಿದ ನನ್ನ ಮೇಲೆ ನಾಲ್ಕೈದು, ಶಿವಕುಮಾರ್ ಅವರ ವಿರುದ್ಧ 9 ಕೇಸ್ ದಾಖಲಾಗಿದೆ. ಇವರು ಭ್ರಷ್ಟಾಚಾರ, ಕಾನೂನು ಉಲ್ಲಂಘನೆ, ಕೋಮುಸಾಮರಸ್ಯ ಹಾಳುಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಬೇಕಾಗಿದೆ. ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದೆ ಇಡುವ ಕೆಲಸ ಪದಾಧಿಕಾರಿಗಳು ಮಾಡಬೇಕು ಎಂದು ಚರ್ಚೆ ಮಾಡಲಾಗಿದೆ. ಅವರ ಜವಾಬ್ದಾರಿ ಮನವರಿಕೆ ಮಾಡಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top