ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ? ಎಂದು ಕೇಳಿದ್ದೆ. ಜತೆಗೆ ಆ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಿ. ಅವರು ನಿರ್ದೋಷಿಗಳಾದರೆ ಅವರಿಗೆ ಮತ್ತೆ ಅದೇ ಜವಾಬ್ದಾರಿ ನೀಡಿ ಎಂದು ಹೇಳಿದ್ದೆ. ಈ ಕೆಲಸ ಮಾಡಲು ಸರ್ಕಾರಕ್ಕೆ 15 ದಿನಗಳು ಬೇಕಾಯಿತೇ? ಇಂದು ಏಕಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಆಮೂಲಕ ಸರ್ಕಾರ ಎಲ್ಲೋ ಒಂದುಕಡೆ ಈ ಹಗರಣ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ, ಸರ್ಕಾರದ ಪಾಲುದಾರಿಕೆ ಇದೆ ಎಂದು ಒಪ್ಪಿಕೊಳ್ಳುತ್ತಿರುವಂತಿದೆ.

ದಿವ್ಯಾ ಹಾಗರಗಿ ಅವರು ಡಿ.ಕೆ. ಶಿವಕುಮಾರ್ ಅವರ ಜತೆಗಿರುವ ಫೋಟೋ ಬಿಡುಗಡೆ ಆಗಿತ್ತು, ಇಂದು ಬೇರೆ ಕಾಂಗ್ರೆಸ್ ನಾಯಕರ ಜತೆ ಇರುವ ಫೋಟೋ ಬಂದಿದೆ. ನಿನ್ನೆ ಪ್ರಧಾನಮಂತ್ರಿಗಳ ಜತೆಗಿನ ಫೋಟೋ ಬಿಡುಗಡೆ ಆಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿನ್ನೆ ಬಿಜೆಪಿಯವರು ಬಿಡುಗಡೆ ಮಾಡಿದ ಫೋಟೋ 2018ರಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ನರ್ಸಿಂಗ್ ಕಾಲೇಜು ವಿಚಾರಕ್ಕೆ ಅಂದಿನ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವ ಬಗ್ಗೆ ಅವರೇ ಹಾಕಿಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ತಮಗೆ ಬೇಕಾದಷ್ಟು ವಿಚಾರ ಮಾತ್ರ ನೋಡುತ್ತಾರೆ. ದಿವ್ಯಾ ಅವರು ಯಾರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಬೇರೆ ವಿಚಾರ. ಅವರು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು, ದಿಶಾ ಸಮಿತಿ ಸದಸ್ಯರಿಗೆ, ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು. ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಸೇರಿದ್ದರಾ ಎಂಬುದು ಬೇರೆ ವಿಚಾರ. ಅವರಿಗೆ ನಿಜವಾಗಲೂ ಕಾಳಜಿ ಇದ್ದರೆ, ಅವರೊಬ್ಬರು ಆರೋಪಿ. ಪರೀಕ್ಷೆ ಬರೆದ 56 ಸಾವಿರ ಅಭ್ಯರ್ಥಿಗಳು ಕಂಗಾಲಾಗಿದ್ದು, ಆರೋಪಿಯನ್ನು ಬಂಧಿಸುವ ಬದಲು, ಇವರ ಜತೆ ಫೋಟೋ ಇದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ. ಅವರ ಮಗನ ಮದುವೆಗೆ ಆಮಂತ್ರಣ ನೀಡಲು ಬಂದಿದ್ದರು. ನನ್ನ ಜತೆಗಿನ ಫೋಟೋ ಕೂಡ ಇರಬಹುದು. ಮೋದಿ ಅವರ ಜತೆಗೂ ಫೋಟೋ ಇರಬಹುದು. ಹಾಗೆಂದು ನೀವು ತನಿಖೆ ಮಾಡುವುದನ್ನು ನಿಲ್ಲಿಸುತ್ತೀರಾ? 57 ಸಾವಿರ ಜನರ ಭವಿಷ್ಯವನ್ನು ಕತ್ತಲಿಗೆ ದೂಡುತ್ತೀರಾ? ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬಿಜೆಪಿ ಐಟಿ ಸೆಲ್ ಹೇಳುವುದಕ್ಕೆಲ್ಲ ಉತ್ತರ ನೀಡುತ್ತಿದ್ದರೆ ನಮಗೆ ಅದೊಂದೆ ಕೆಲಸವಾಗುತ್ತದೆ’ ಎಂದು ಉತ್ತರಿಸಿದರು.

ಇನ್ನು ಪ್ರಧಾನಮಂತ್ರಿಗಳು ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಇಂಧನ ತೈಲ ಸುಂಕ ಕಡಿತ ಮಾಡಬೇಕು ಎಂಬ ಸಲಹೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ. ಕೇಂದ್ರ ಸರ್ಕಾರ ಸೆಸ್ ಮೂಲಕ ಸಂಗ್ರಹಿಸಿರುವ 27 ಲಕ್ಷ ಕೋಟಿ ಹಣವನ್ನು ಜನರಿಗೆ ಉಪಯೋಗವಾಗುವಂತೆ ಹಂಚಿಕೆ ಮಾಡಲಿ. ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಅನುದಾನದಲ್ಲಿ ಅನ್ಯಾಯವಾಗುತ್ತಿದ್ದು, ಜಿಎಸ್ ಟಿ ಪಾಲಿನಲ್ಲೂ ಅನ್ಯಾಯವಾಗುತ್ತಿದ್ದು, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಲಾಗುತ್ತಿದೆ. ಆ ಬಗ್ಗೆ ಮಾತನಾಡದೇ, ಕಾಂಗ್ರೆಸ್ ಸರ್ಕಾರಗಳು ಇಳಿಕೆ ಮಾಡಿಲ್ಲ, ಎಂಬ ಉಡಾಫೆ ಮಾತುಗಳ ಮೂಲಕ ಪ್ರಧಾನಮಂತ್ರಿಗಳು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನಿ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.