“ಗ್ರಾಮ ಒನ್” ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರೊಂದಿಗೆ ಸಿಎಂ ವಿಡಿಯೋ ಸಂವಾದ

ಕಾರ್ಯಕ್ಷಮತೆ ಹೆಚ್ಚಿಸಿ ಯೋಜನೆ ಯಶಸ್ವಿಗೊಳಿಸಿ : ಸಿಎಂ ಬಸವರಾಜ ಬೊಮ್ಮಾಯಿ


ಕೊಪ್ಪಳ: ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ “ಗ್ರಾಮ ಒನ್” ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಗ್ರಾಮ ಒನ್ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ಅವರು ಇಂದು (ಫೆ.೦೫) ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಸೇವೆಗಳನ್ನು ಜನರ ಹತ್ತಿರ ತೆಗೆದುಕೊಂಡು ಹೋಗಲು ಗ್ರಾಮ ಒನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಜನರ ಅಲೆದಾಟ ತಪ್ಪುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ತಡೆದಂತಾಗುತ್ತದೆ. ಸರ್ಕಾರವು ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರಿಗೆ ಜವಾಬ್ದಾರಿ ನೀಡಿದ್ದು, ಸರ್ಕಾರದ ಸೇವೆ ಹಾಗೂ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು. ಯಾವುದೇ ಅರ್ಜಿಗಳನ್ನು ತಿರಸ್ಕರಿಸಿದರೆ ಅದಕ್ಕೆ ಸಕಾರಣವನ್ನು ನೀಡಬೇಕು. ಜನರು ಅರ್ಜಿ ಸಲ್ಲಿಸಿ ಅನವಶ್ಯಕವಾಗಿ ತಿರುಗಾಡುವಂತಾಗಬಾರದು. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.


ಉತ್ತಮ ಕಾರ್ಯನಿರ್ವಹಿಸುವ ಗ್ರಾಮ ಒನ್ ಸೇವಕರಿಗೆ ರೂ. ೧೦,೦೦೦ ಪ್ರಥಮ, ರೂ. ೭೦೦೦ ದ್ವಿತೀಯ ಹಾಗೂ ರೂ. ೫೦೦೦ ತೃತೀಯ ಬಹುಮಾನ ನೀಡಲಾಗುವುದು. ಬಹುಮಾನ ಪ್ರಕ್ರಿಯೆ ಪ್ರತಿ ವಾರಕ್ಕೊಮ್ಮೆ ನಡೆಯಲಿದೆ. ಇದರ ಜೊತೆಗೆ ಗ್ರಾಮ ಒನ್ ಯೋಜನೆಯಡಿ ಉತ್ತಮ ಕೆಲಸ ನಿರ್ವಹಿಸುವಲ್ಲಿ ಆಯ್ಕೆಯಾದ ಜಿಲ್ಲೆಗೆ ಒಂದು ಲಕ್ಷ ಬಹುಮಾನವನ್ನು ಸಹ ನೀಡಲಾಗುವುದು ಎಂದರು.
ಸರ್ಕಾರದ ಯಶಸ್ಸು ಗ್ರಾಮ ಒನ್ ಮೂಲಕ ನೀಡುವ ಸೇವೆಗಳ ಮೇಲೆ ನಿಂತಿದ್ದು, ನಿರ್ವಾಹಕರು ಉತ್ತಮ ಕೆಲಸ ನಿರ್ವಹಿಸುತ್ತೀರೆಂಬ ವಿಶ್ವಾಸವಿದೆ. ಇನ್ನೂ ಕೆಲವು ಗ್ರಾ.ಪಂ.ಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಪ್ರಾರಂಭಿಸದೇ ಇರುವ ಪ್ರದೇಶಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತ್ವರಿತವಾಗಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯುವುದರೊಂದಿಗೆ ಸೇವೆಗಳ ಕುರಿತು ತಮ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ವಿಡಿಯೋ ಸಂವಾದದ ನಂತರ ಕೊಪ್ಪಳ ಪ್ರಭಾರಿ ಜಿಲ್ಲಾಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗ ಳ ಮೂಲಕ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ದೊರೆಯುವ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಸಿಗುವಂತಾಗಲಿ. ಯಾವುದೇ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಸಮಸ್ಯೆಯನ್ನು ಸರಿಪಡಿಸಿಕೊಂಡು ಜನರಿಗೆ ತ್ವರಿತವಾಗಿ ಸೇವೆ ಒದಗಿಸಿ. ಮುಖ್ಯಮಂತ್ರಿಗಳು ಘೋಷಿಸಿರುವ ಬಹುಮಾನವನ್ನು ಪಡೆದುಕೊಳ್ಳುವುದಲ್ಲದೇ ನಮ್ಮ ಜಿಲ್ಲೆಗೂ ಪ್ರಶಸ್ತಿ ಲಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಉತ್ತಮ ರೀತಿಯ ಸೇವೆಯನ್ನು ನೀಡಬೇಕು. ಈ ಬಗ್ಗೆ ಜಿಲ್ಲೆಯಾದ್ಯಂತ ಅಗತ್ಯ ಅರಿವು ಮೂಡಿಸಿ. ಗ್ರಾಮ ಒನ್ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಗ್ರಾಮ ಒನ್ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳು ;
ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಹಕ್ಕು ಮತ್ತು ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್.ಟಿ.ಸಿ), ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಕಾರ್ಡ್, ಆಧಾರ್ ಕಾರ್ಡ್, ವೃದ್ಧಾಪ್ಯ/ ವಿಧವಾ/ ಅಂಗವಿಕಲ ವೇತನ, ಹಿರಿಯ ನಾಗರಿಕರ ಗುರುತಿನ ಚೀಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಡಿಪ್ಲೋಮಾ ಮೂಲ ಪ್ರಮಾಣ ಪತ್ರ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ ಪತ್ರ, ಆಯು?ನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆ, ವಿದ್ಯಾರ್ಥಿಗಳ ಬಸ್ ಪಾಸ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇವೆಗಳು, ವಂಶ ವೃಕ್ಷ ಅರ್ಜಿ, ನಿವಾಸ ಪ್ರಮಾಣ ಪತ್ರ, ಪಶುಸಂಗೋಪನೆ ಇಲಾಖೆ ಸೇವೆಗಳು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇವೆಗಳು, ಆರ್.ಟಿ.ಓ ಸೇವೆಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಣಿ, ಇ-ಸ್ಟ್ಯಾಂಪ್ ಸೇರಿದಂತೆ ೧೦೦ ಕ್ಕೂ ಹೆಚ್ಚು ನಾಗರಿಕ ಸೇವೆಗಳು ಲಭಿಸಲಿವೆ.
ಗ್ರಾಮ ಒನ್ ಕೇಂದ್ರಗಳಿಂದ ದೊರೆಯುವ ಲಾಭಗಳು ;
ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಆರಂಭದಿಂದ ನಾಗರಿಕರು, ಹಿರಿಯ ನಾಗರಿಕರು, ಮಹಿಳೆಯರು, ವಿಶೇ?ಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ಸೇವೆಗಳನ್ನು ಪಡೆಯಬಹುದು. ತಾಲ್ಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡಲು ತಗಲುವ ಸಂಚಾರ ವೆಚ್ಚವಿಲ್ಲದೆ, ಸಮಯದ ಉಳಿತಾಯದೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.
ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಉಪವಿಭಾಗಾಧಿಕಾರಿ ಹೇಮಂತ್ ಕುಮಾರ್, ತಹಶೀಲ್ದಾರರಾದ ಅಮರೇಶ ಬಿರಾದರ್, ಯು.ನಾಗರಾಜ ಹಾಗೂ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top