ಬಿಡದಿಯ ಟೊಯೋಟಾಗೆ ಭೂಮಿ ನೀಡಿದ ರೈತರಿಗೆ 20 ವರ್ಷಗಳಾದರೂ ಪರಿಹಾರ ನೀಡದ ಕೆಐಎಡಿಬಿ

ಬೆಂಗಳೂರು, ಫೆ, 5; ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಟೊಯೋಟ ಕಾರ್ಖಾನೆಗಾಗಿ ಶಾನಮಂಗಳ, ಬಾನಂದೂರು, ಅಬ್ಬಿನಕುಂಟೆ ಗ್ರಾಮಗಳಲ್ಲಿ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದಕ್ಕೆ ಪರಿಹಾರ ಪಡೆಯಲು ಕೆಐಎಡಿಬಿ ಕಚೇರಿಗೆ ಕಳೆದ 20 ವರ್ಷಗಳಿಂದ ಅಲೆದು, ಅಲೆದು ಬಸವಳಿದಿದ್ದಾರೆ. ಪರಿಹಾರ ಎಂಬುದು ಇನ್ನೂ ಮರಿಚಿಕೆಯಾಗಿಯೇ ಇದೆ. ಪರಿಹಾರ ನೀಡುವಂತೆ ರಾಮನಗರ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳು ನೀಡಿದ ಆದೇಶಗಳಿಗೆ ಕೆಐಎಡಿಬಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ರೈತರ ಮನವಿಗೆ ಬೆಲೆ ನೀಡುತ್ತಿಲ್ಲ. ಇದರಿಂದಾಗಿ ಭೂಮಿ ಕಳೆದುಕೊಂಡ ರೈತರು ಕೆಐಎಡಿಬಿ ಕಚೇರಿಗೆ ಅಲೆದು ಅಲೆದು ಪರಿಹಾರದ ಪರಿಹಾರದ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.

ಬಹುತೇಕ ರೈತರಿಗೆ ವಯಸ್ಸಾಗಿದ್ದು, ಕೆಲವು ರೈತರು ಮರಣ ಹೊಂದಿದ್ದಾರೆ. ಬದುಕುಳಿದವರು ಸಂಧ್ಯಾ ಕಾಲದಲ್ಲಾದರೂ ಪರಿಹಾರಕ್ಕಾಗಿ ಆಸೆ ಕಂಗಳಿಂದ ಕಾಯುತ್ತಿದ್ದಾರೆ. ಇಂದಲ್ಲಾ ನಾಳೆ ಪರಿಹಾರ ದೊರೆಯಬಹುದು ಎನ್ನುವ ನಿರೀಕ್ಷೆಯಿಂದ ಜಾತಕ ಪಕ್ಷಿಗಳಂತೆ ಈ ರೈತರು ಕಾಯುತ್ತಿದ್ದಾರೆ. ಈ ಕೃಷಿಕರ ಗೋಳು ತಬರನ ಕಥೆಯಂತಾಗಿದೆ. ಕಳೆದ 1998 ರಲ್ಲಿ ಟೊಯೋಟ ಕಾರ್ಖಾನೆಗಾಗಿ ಈ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಗೆ ಕೆಐಎಡಿಬಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಎ, ಖರಾಬು ಭೂಮಿಗೆ ಈವರೆಗೆ ನಯಾ ಪೈಸೆ ಪರಿಹಾರ ದೊರೆತಿಲ್ಲ. ಎ ಖರಾಬು ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ರೈತರನ್ನು ಕೆ.ಐ.ಡಿ.ಬಿ. ದಾರಿ ತಪ್ಪಿಸಿತ್ತು.

ಕೆಐಎಡಿಬಿ ವರ್ತನೆಯಿಂದ ರೋಸಿ ಹೋದ ಸುಮಾರು 50 ಮಂದಿ, ಸಣ್ಣ, ಅತಿ ಸಣ್ಣ ರೈತರ ಗುಂಪು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದಾಗ ಎ ಖರಾಬು ಭೂಮಿ ಸರ್ಕಾರದ್ದಲ್ಲ, ಇದು ಭೂ ಮಾಲೀಕರಿಗೆ ಸೇರುತ್ತದೆ. ಹೀಗಾಗಿ ಪರಿಹಾರ ನೀಡುವಂತೆ 2003 ರ ಆಗಸ್ಟ್ 26 ರಂದು ರೈತರ ಮನವಿಯನ್ನು ಪುರಸ್ಕರಿಸಿ ಆದೇಶಿಸಿತು. ಇದೇ ಕಾಲಕ್ಕೆ ಪ್ರಕರಣವನ್ನು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಭೂ ಮಾಲೀಕತ್ವದ ನೈಜತೆಯನ್ನು ಪರಿಶೀಲಿಸಿ ಖರಾಬು ಭೂಮಿ ಹೊಂದಿದವರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು. ಆದರೆ ರಾಮನಗರ ನ್ಯಾಯಾಲಯವೂ ಸಹ ಭೂ ಮಾಲೀಕರ ನೈಜತೆಯನ್ನು ಪರಿಗಣಿಸಿ ಆದೇಶ ಜಾರಿ ಮಾಡಲು ಸುದೀರ್ಘ 10 ವರ್ಷ ತೆಗೆದುಕೊಂಡಿತು. 2013 ರಲ್ಲಿ ಸರ್ಕಾರದ ನಿಯಮಾವಳಿಗಳಂತೆ ಪರಿಹಾರ ಬಿಡುಗಡೆ ಮಾಡಬೇಕು ಕೆಐಎಡಿಬಿಗೆ ಆದೇಶ ನೀಡಿತು.

ಆದರೆ ಇದನ್ನು ಪ್ರಶ್ನಿಸಿ ಕೆಐಎಡಿಬಿ ಹೈಕೋರ್ಟ್, ತರುವಾಯ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಆದರೆ ಈ ಮೇಲ್ಮನವಿ ಸಂದರ್ಭದಲ್ಲಿ ರಾಮನಗರ ನ್ಯಾಯಾಲಯ ನೀಡಿರುವ ಆದೇಶ ಕ್ರಮ ಬದ್ಧವಾಗಿದೆ. ತಕ್ಷಣವೇ ಪರಿಹಾರ ನೀಡುವಂತೆ ಆದೇಶಿಸಿತು. ಕೆಐಎಡಿಬಿ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಮನಗರ ನ್ಯಾಯಾಲಯ ಕೆಐಎಡಿಬಿಯನ್ನೇ ಅಟ್ಯಾಚ್ ಮೆಂಟ್ ಮಾಡುವಂತೆ ಮತ್ತೊಂದು ಆದೇಶ ಹೊರಡಿಸಿತು. ಇಷ್ಟಾದರೂ ಕೆಐಎಡಿಬಿ ಅಧಿಕಾರಿಗಳು ಪರಿಹಾರ ನೀಡಲು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ. ಇವರೇನು ದೊಡ್ಡ ರೈತರಲ್ಲ. ಹತ್ತು ಗುಂಟೆ, ಇಪ್ಪತ್ತು ಗುಂಟೆ, ಒಂದು, ಎರಡು ಎಕರೆ ಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತರು. ಕೆಐಎಡಿಬಿ ಈ ಭೂಮಿ ಟೊ ಯೋಟಾಗೆ ಹಸ್ತಾಂತರವಾಗಿದ್ದು, ಕೈಗಾರಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಕೈಗಾರಿಕಾಭಿವೃದ್ಧಿಗಾಗಿ ಭೂಮಿ ನೀಡಿದ ರೈತರು ಮಾತ್ರ ಸಂಕಷ್ಟದಲ್ಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top