ಮಾರ್ಚ್ ೧೨ ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್


ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಮಾರ್ಚ್ ೧೨ ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿದೆ.

ನ್ಯಾಯಾಲಯದ ದಾವೆಗಳಲ್ಲಿನ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಮತ್ತು ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.
ಸಾರ್ವಜನಿಕರು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು ಮತ್ತು ಇನ್ನೂ ನ್ಯಾಯಾಲಯದಲ್ಲಿ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳು ಎಂದು ಪರಿಗಣಿಸಿ, ಹಾಗೂ ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳು, ರಾಜೀ ಆಗಬಹುದಾದ ಸಿವಿಲ್ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು (ವಿಚ್ಛೇದನ ಹೊರತುಪಡಿಸಿ), ರಾಜಿಯಾಗಬಲ್ಲ ಅಪರಾಧ ಪ್ರಕರಣಗಳು, ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಹಾಗೂ ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ನಾಗರಿಕರು ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಗಂಗಾವತಿ, ಕುಷ್ಟಗಿ, ಯಲಬುರ್ಗಾಗಳಲ್ಲಿ ಆನ್‌ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್.ಎಮ್.ಎಸ್, ವಾಟ್ಸ್‌ಆಪ್, ಎಲೆಕ್ಟ್ರಾನಿಕ್ ಮೋಡ್ ಮತ್ತು ಖುದ್ದಾಗಿ ಹಾಜರಾಗುವ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ಸಂಖ್ಯೆ: ೧೮೦೦-೪೨೫-೯೦೯೦೦ ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಲ್.ವಿಜಯಲಕ್ಷ್ಮೀದೇವಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *

Translate »
Scroll to Top