ರಾಜ್ಯ ವಕೀಲರ ಪರಿಷತ್ತು ನೂತನ ಅಧ್ಯಕ್ಷರಾಗಿ ಕಾಶಿನಾಥ್ ಪದಗ್ರಹಣ

ಬೆಂಗಳೂರು, ಜ, 10: ಕೋವಿಡ್ ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕಿನಿಂದ ಸಂಕಷ್ಟದಲ್ಲಿರುವ ವಕೀಲರಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷ ಮೋತಕಪಲ್ಲಿ ಕಾಶೀನಾಥ್ ಹೇಳಿದ್ದಾರೆ. ನಗರದ ಕೆ.ಎಸ್.ಬಿ.ಎಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಲಬುರಗಿಯ ಮೋತಕಪಲ್ಲಿ ಕಾಶೀನಾಥ್ ಪದಗ್ರಹಣ ಮಾಡಿದರು. ಇವರ ಜತೆ ಉಪಾಧ್ಯಕ್ಷರಾಗಿ ಚಂದ್ರಮೌಳಿ ಅಧಿಕಾರ ಸ್ವೀಕರಿಸಿದರು. ಬಳಿಕ ಸಮಾರಂಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರು ಕಳೆದ ಎರಡು ವರ್ಷಗಳಿಂದ ಕೋವಿಡ್ ಮತ್ತು ರೂಪಾಂತರಿ ವೈರಸ್ ನಿಂದಾಗಿ ನ್ಯಾಯಾಲಯದ ಕಲಾಪಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ವಕೀಲ ಸಮುದಾಯ ಆರ್ಥಿಕ ತೊಂದರೆಗಳಿಗೆ ಸಿಲುಕಿದೆ. ಈ ಪೈಕಿ ಕೆಲವರು ತೀವ್ರ ಸಂಕಷ್ಟದಲ್ಲಿದ್ದು, ಇಂತಹವರ ಜತೆ ವಕೀಲರ ಪರಿಷತ್ತು ನಿಲ್ಲಲಿದೆ. ವಕೀಲರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಹೊಸದಾಗಿ ನೋಂದಣಿಯಾಗುವ ವಕೀಲರಿಗೆ ಸಂವಿಧಾನದ 371 ಜೆ ಅನ್ವಯ ಇನ್ನೂ ಹೆಚ್ಚಿನ ಸಹಾಯ, ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಹೈ.ಕ. ಭಾಗದ ವಕೀಲರಿಗೆ ವಿಶೇಷ ಸ್ಥಾನಮಾನ ಸೌಲಭ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಮೋತಕಪಲ್ಲಿ ಕಾಶೀನಾಥ್ ಹೇಳಿದರು. ಗಾಮೀಣ ಪ್ರದೇಶದಿಂದ ಬಂದು ವಕೀಲ ವೃತ್ತಿ ನಡೆಸುವವರಿಗೆ ಆರ್ಥಿಕ ಸಹಾಯ ಒದಗಿಸುವುದು ನಮ್ಮ ಗುರಿಯಾಗಿದೆ. ವಕೀಲರಿಗೆ ಮೂಲಭೂತ ಸೌಕರ್ಯಗಳಾದ ಗ್ರಂಥಾಲಯ, ನೂತನ ತಂತ್ರಜ್ಞಾನದ ಸೌಲಭ್ಯಗಳು, ಕಂಪ್ಯೂಟರ್ ಗಳನ್ನು ಒದಗಿಸಲಾಗುವುದು. ವೃತ್ತಿ ಘನತೆ ಎತ್ತಿ ಹಿಡಿಯಲು, ವೃತ್ತಿಪರರ ಹಿತ ರಕ್ಷಣೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಹೇಳಿದರು.

ಭಾರತೀಯ ವಕೀಲರ ಪರಿಷತ್ತಿನ ಸದಸ್ಯ ಹಾಗೂ ಸಹ ಸದಸ್ಯ ವೈ. ಆರ್ ಸದಾಶಿವರೆಡ್ಡಿ, ರಾಜ್ಯ ವಕೀಲರ ಪರಿಷತ್ತು ವೃತ್ತಿಪರ ಚಟುವಟಿಕೆಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು. ಇದಕ್ಕೆ ಭಾರತೀಯ ವಕೀಲರ ಪರಿಷತ್ತಿನಿಂದ ಅಗತ್ಯವಾಗಿರುವ ಎಲ್ಲಾ ಸಹಕಾರ ಮತ್ತು ನೆರವು ಕಲ್ಪಿಸಲಿದೆ ಎಂದರು. ಮಾಜಿ ಅಧ್ಯಕ್ಷ ಕೆ.ಬಿ.ನಾಯ್ಕ್ ಹಾಗೂ ನಿರ್ಗಮಿತ ಅಧ್ಯಕ್ಷ ಶ್ರೀನಿವಾಸ ಬಾಬು ಎಲ್ ಮತ್ತು ಉಪಾಧ್ಯಕ್ಷ ಕಿವಾಡ ಕಲ್ಮೇಶ್ವರ ತುಕಾರಾಮ, ಕಾರ್ಯದರ್ಶಿ ಅರುಣ ಪೂಜಾರ್ ತಂಡ ನೂತನ ಅಧಿಕಾರವನ್ನು ಹಸ್ತಾಂತರಿಸಿತು. ಕೆ.ಬಿ. ನಾಯ್ಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಕೀಲರ ವೃತ್ತಿ ನಡೆಸುವ ವಕೀಲರಿಗೆ ಕಾರ್ಯಗಾರ ಹಾಗೂ ವೃತ್ತಿಪರತೆ ಹೆಚ್ಚಿಸಲು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇನ್ನಷ್ಟು ಶ್ರಮಿಸಬೇಕೆಂದು ಹೇಳಿದರು. ಹೈಕೋರ್ಟ್ ಹಾಗೂ ಕರ್ನಾಟಕ ರಾಜ್ಯ ಆಡಳಿತ ಮಂಡಳಿಯ ನ್ಯಾಯವಾದಿ ಸಂತೋಷ ಹೆಚ್, ಪಾಟೀಲ ಮತ್ತು ಕಲಬುರಗಿಯ ಹಿರಿಯ ವಕೀಲರಾದ ಬಿ.ಬಿ.ಅಷ್ಟಗಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top