ದಾವಣಗೆರೆ,ಅ, 4: ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಕಳೆದ ಐದು ತಿಂಗಳಿನಿಂದ ಬಾಕಿ ಬರಬೇಕಿರುವ ಶಿಷ್ಯವೇತನಕ್ಕೆ ಒತ್ತಾಯಿಸಿ ಇಂದು ಬೆಳಿಗ್ಗೆ ನಗರದ ಜಯದೇವ ವೃತ್ತದಲ್ಲಿ ಪಿಪಿಇ ಕಿಟ್ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೊರೊನಾ ಸಂಕಷ್ಟದ ವೇಳೆಯಲ್ಲಿ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದ ವೈದ್ಯ ವಿದ್ಯಾರ್ಥಿಗಳು ಈಗ ಬೀದಿಗೆ ಬರುವಂತಾಗಿದೆ. ಕಳೆದ ನಾಲ್ಕು ದಿನಗಳಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿರುವ ವೈದ್ಯ ವಿದ್ಯಾರ್ಥಿಗಳ ಹೋರಾಟದ ಕಾವು ದಿನೇ ದಿನೇ ಏರುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಕೊರೊನಾ ವೇಳೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ಕೊರೊನಾ ಕಡಿಮೆಯಾಗುತ್ತಿದ್ದಂತೆ ನಮ್ಮ ಬಗ್ಗೆ ಕೇರ್ ಲೆಸ್ ಮಾಡಲಾಗುತ್ತಿದೆ. ಕಷ್ಟದ ವೇಳೆಯಲ್ಲಿ ನಮ್ಮ ಸೇವೆ ಬೇಕು. ಈಗ ಶಿಷ್ಯವೇತನ ನೀಡಲು ಸತಾಯಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಬಾಕಿ ನೀಡಬೇಕಿರುವ ಶಿಷ್ಯ ವೇತನ ನೀಡುವಂತೆ ಆಗ್ರಹಿಸಿ ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಬೀದಿ ನಾಟಕ, ತಟ್ಟೆ ಬಾರಿಸುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದಷ್ಟು ಬೇಗ ಕಳೆದ ಐದು ತಿಂಗಳಿನಿಂದ ಬಾಕಿ ನೀಡಬೇಕಿರುವ ಸ್ಟೈಫಂಡ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ಕಾರದ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಪತ್ರ ಹಾಗೂ ಮನವಿ ಪತ್ರ ಸಲ್ಲಿಕೆ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತು ಈಗ ಹೋರಾಟದ ಹಾದಿ ತುಳಿಯುವಂತಾಗಿದೆ. ಕೊರೊನಾದಂತ ಸಂಕಷ್ಟದ ವೇಳೆಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ್ದೇವೆ. ಹಗಲಿರುಳು ಕಷ್ಟಪಟ್ಟಿದ್ದೇವೆ. ಈಗ ಕೊರೊನಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಕೆಲಸ ಮಾಡುವ ವೈದ್ಯರಿಗೆ ಸಕಾಲಕ್ಕೆ ವೇತನ ಪಾವತಿ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಕೋರ್ಟ್ ನಿರ್ದೇಶನ ನೀಡಿದೆ. ಆದರೂ ಕಳೆದ ಐದು ತಿಂಗಳಿನಿಂದ ವೇತನ ಪಾವತಿಸಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾಗಿರುವ ಜೆಜೆಎಂಎಂಸಿ ವಿದ್ಯಾರ್ಥಿಗಳು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ರಾಜ್ಯ ಸರ್ಕಾರವೇ ಶಿಷ್ಯವೇತನ ನೀಡುತಿತ್ತು. ಆದ್ರೆ ಕಳೆದ ಐದು ತಿಂಗಳಿನಿಂದ ಶಿಷ್ಯವೇತನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಈ ವೇಳೆ ನೂರಾರು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.