ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ಕಾಶ್ಮೀರದ 9ರ ಪೋರಿ ಅತಿಕಾ ಮೀರ್‌ಗೆ 3ನೇ ಸ್ಥಾನ

ಬೆಂಗಳೂರು: ಭಾರತದ ಯುವ ಕಾರ್ಟಿಂಗ್‌ ತಾರೆ, ಕಾಶ್ಮೀರದ 9 ವರ್ಷ ವಯಸ್ಸಿನ ಅತಿಕಾ ಮೀರ್‌, ಇಲ್ಲಿ ಭಾನುವಾರ ನಡೆದ ಮೀಕೊ ಎಫ್‌ಎಂಎಸ್‌ಸಿಐ ರೋಟಾಕ್ಸ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ 2024ರಲ್ಲಿ 2ನೇ ರನ್ನರ್‌-ಅಪ್‌ ಸ್ಥಾನ ಪಡೆದಿದ್ದಾರೆ.

ನಗರದ ಮೀಕೋ ಕಾರ್ಟೋಪಿಯಾ ಟ್ರ್ಯಾಕ್‌ನಲ್ಲಿ ನಡೆದ ರೇಸ್‌ನಲ್ಲಿ ಅತಿಕಾ, ಮೈಕ್ರೋ ಮ್ಯಾಕ್ಸ್‌ ವಿಭಾಗ (7ರಿಂದ 12 ವರ್ಷ ವಯಸ್ಸಿನೊಳಗಿನವರು)ದ ಅಂತಿಮ ರೇಸ್‌ನ ಮೊದಲ ಸುತ್ತಿನಲ್ಲಿ 12 ನಿಮಿಷ 21.397 ಸೆಕೆಂಡ್‌ಗಳಲ್ಲಿ ರೇಸ್‌ ಪೂರ್ತಿಗೊಳಿಸಿ ಪೋಡಿಯಂ ಫಿನಿಶ್‌ ಮಾಡಿದರು.

 

ಚೆನ್ನೈನ ರಿವಾನ್‌ ಪ್ರೀತಮ್‌ (12:16.790) ಹಾಗೂ ರೆಹಾನ್ ಖಾನ್‌ (12:19.920) ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರು. ಈ ಗೆಲುವಿನೊಂದಿಗೆ ಅತಿಕಾ, ಸತತ 3 ವಾರಾಂತ್ಯಗಳಲ್ಲಿ ಮೂರು ವಿವಿಧ ವಿಭಾಗಗಳಲ್ಲಿ ಅಗ್ರ-3ರೊಳಗೆ ಸ್ಥಾನ ಗಳಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಅತಿಕಾ, ‘ನನ್ನ ತವರು ಭಾರತಕ್ಕೆ ವಾಪಸಾಗಿ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದು ನನ್ನ ಪಾಲಿಗೆ ಬಹಳ ಹೆಮ್ಮೆಯ ವಿಚಾರ. ಈ ಸ್ಪರ್ಧೆ ಹಾಗೂ ಪಾಲ್ಗೊಂಡಿರುವ ರೇಸರ್‌ಗಳು ಟಾಪ್‌ ಕ್ಲಾಸ್‌. ಇಲ್ಲಿ ಸ್ಪರ್ಧೆ ಮಾಡಿದ್ದು ನನಗೆ ತುಂಬಾ ಖುಷಿ ನೀಡಿತು’ ಎಂದರು.

‘ಆರಂಭದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ತುಸು ಹಿನ್ನಡೆ ಅನುಭವಿಸಿದರೂ, ನಮ್ಮ ತಂಡ ಎಂಸ್ಪೋರ್ಟ್‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ನನಗೆ ಉತ್ತಮ ಕಾರ್ಟ್‌ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಫಲಿತಾಂಶ ನನ್ನಲ್ಲಿ ಖುಷಿ ಮೂಡಿಸಿದ್ದು, ಮುಂದಿನ ಸುತ್ತಿನಲ್ಲಿ ಮತ್ತಷ್ಟು ಉತ್ತಮ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ’ ಎಂದು ಅತಿಕಾ ಹೇಳಿದರು.

ಶನಿವಾರ ಅರ್ಹತಾ ಸುತ್ತಿನಲ್ಲಿ ಅತಿಕಾ ಮೀರ್‌ 5ನೇ ಸ್ಥಾನ ಪಡೆದಿದ್ದರು. ಅಲ್ಲದೇ ಕೇವಲ 0.2 ಸೆಕೆಂಡ್‌ಗಳಿಂದ ಪೋಲ್‌ ಪೊಸಿಷನ್‌ ಇವರ ಕೈತಪ್ಪಿತ್ತು. ಪ್ರಿ ಫೈನಲ್ಸ್‌ ಹಾಗೂ ಫೈನಲ್ಸ್‌ನಲ್ಲಿ ಅತಿಕಾ ಉತ್ತಮ ಲಯ ಕಾಯ್ದುಕೊಂಡು, ಸ್ಥಿರ ಪ್ರದರ್ಶನದ ಮೂಲಕ ಪೋಡಿಯಂನಲ್ಲಿ ಸ್ಥಾನ ಗಳಿಸಿದರು.

ಅತಿಕಾರ ತಂದೆ, ಮಾಜಿ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ ಆಸಿಫ್‌ ನಸೀರ್‌, ‘ಕಳೆದ ವಾರವಷ್ಟೇ ನಾವು ಈ ರೇಸ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನಮ್ಮ ಪಾಲಿಗೆ ಇದು ಅತ್ಯುತ್ತಮ ಫಲಿತಾಂಶ. ಬಹಳ ಕಡಿಮೆ ಸಮಯದಲ್ಲಿ ನಮಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಟ್ಟು, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ ಎಂಸ್ಪೋರ್ಟ್‌ ತಂಡಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ. 2ನೇ ಸುತ್ತಿನ ಮೇಲೆ ನಾವು ಗಮನ ಹರಿಸಲಿದ್ದು, ಸುಧಾರಿತ ಪ್ರದರ್ಶನ ನೀಡಲು ಶ್ರಮಿಸುತ್ತೇವೆ’ ಎಂದು ಹೇಳಿದರು.

 

 

ಅತಿಕಾ ಈಗ ಯುರೋಪ್‌ಗೆ ತೆರಳಲಿದ್ದು, ಮುಂದಿನ ಕೆಲ ವಾರಗಳ ಕಾಲ ವಿವಿಧ ರೇಸ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top