ಪ್ರಮಾಣ ವಚನಕ್ಕು ಮುನ್ನ ಬಿಎಸ್ ವೈ ಆಶೀರ್ವಾದ ಪಡೆದ ಪ್ರಲ್ಹಾದ ಜೋಶಿ – ಸಿಹಿ ತಿನಿಸಿ ಜೋಶಿ ಬೆನ್ನು ತಟ್ಟಿ ಬೆಂಬಲಿಸಿದ ಯಡಿಯೂರಪ್ಪ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಮಾಣ ವಚನಕ್ಕೂ ಮುನ್ನ ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು.

ಎನ್ ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿ ಪ್ರಧಾನಿಯಿಂದ ಪ್ರಶಂಸೆ ಪಡೆದಿದ್ದ ಪ್ರಲ್ಹಾದ ಜೋಶಿ ಅವರಿಗೆ ಮತ್ತೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಿಹಿ ತಿನಿಸಿ ಬೆನ್ನು ತಟ್ಟಿದ ಬಿಎಸ್ ವೈ: ಯಡಿಯೂರಪ್ಪ ಅವರು ಜೋಶಿ ಅವರಿಗೆ ಸಿಹಿ ತಿನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನಿಸಿ ಸಂಭ್ರಮದಲ್ಲಿ ಭಾಗಿಯಾದರು.

ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೋದಿ-ಜೋಶಿ ದಾಖಲೆ: ಕೇಂದ್ರದಲ್ಲಿ ಕಾಂಗ್ರೆಸ್ಸೇತರವಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರದ್ದು ಒಂದು ದಾಖಲೆ ಆಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಗೆಲುವು ಸಾಧಿಸಿ ಮತ್ತೆ ಕೇಂದ್ರ ಕ್ಯಾಬಿನೆಟ್ ಅಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ ಪ್ರಲ್ಹಾದ ಜೋಶಿ ಅವರು.

 

ಪ್ರಲ್ಹಾದ ಜೋಶಿ ಅವರು ಮತ್ತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಲ್ಲಿ, ಬೆಂಬಲಿಗರಲ್ಲಿ ಮತ್ತು ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top