ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಸಾಮಾಜಿಕ ನ್ಯಾಯ ಪಾಲನೆ ಮಾಡಿದ್ದೇವೆ. ತಲಾ ಒಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ, ಐದು ಜನ ಹಿಂದುಳಿದ ವರ್ಗದ, ಮಹಿಳಾ ಅಭ್ಯರ್ಥಿ, ಎರಡು ಮಂದಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತಂದು ಮೊದಲ ಬಾರಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರು. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ್ ಅವರು ಇದನ್ನು ವಿರೋಧಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿದ್ದರಿಂದ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಉಳಿದಿದೆ. ಐದು ವರ್ಷಗಳಿಗೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಕಡ್ಡಾಯವಾಗಿ ಚುನಾವಣೆ ನಡೆಯುವಂತೆ ಕಾನೂನು ತಂದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಬಿಜೆಪಿ ಸರ್ಕಾರ ಸೋಲಿನ ಭಯದಿಂದ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮುಂದೂಡಿದೆ. ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರದಿಂದಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರೇ ಇಲ್ಲವಾಗಿದೆ. ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ. ಈ ನಿಟ್ಟಿನಲ್ಲಿ ಬಿಜೆಪಿಯವರ ಕೊಡುಗೆ ಏನಿದೆ? ಬಿಜೆಪಿ ಆಡಳಿತದಲ್ಲಿ ಬಡ ರೈತ ಇನ್ನಷ್ಟು ಬಡವನಾಗುತ್ತಿದ್ದಾನೆ, ಅದಾನಿ, ಅಂಬಾನಿಯಂತವರ ಆಸ್ತಿ ದುಪ್ಪಟ್ಟಾಗುತ್ತಿದೆ. ಬಡವರ ಉಚಿತವಾಗಿ ಕೊಡುವ ಅಕ್ಕಿ ಪ್ರಮಾಣ ಕಡಿಮೆ ಮಾಡುತ್ತಾರೆ, ರೈತರ ಸಾಲ ಮನ್ನಾ ಮಾಡಲ್ಲ, ಉದ್ಯಮಿಗಳ ಸಾಲ ಮನ್ನಾ ಮಾಡಿ, ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡ್ತಾರೆ. ಹಾಗಾದರೆ ಈ ಸರ್ಕಾರ ಯಾರ ಪರವಾಗಿದೆ? ಕೆಲವು ದಿನಗಳ ಹಿಂದೆ ನಾನು ಬೆಳಗಾವಿಗೆ ಹೋಗಿದ್ದಾಗ ನೂರಾರು ಮಹಿಳೆಯರು ಬಂದು 2019ರಲ್ಲಿ ಬಂದ ಪ್ರವಾಹದಿಂದ ನಾವು ಮನೆ ಕಳೆದುಕೊಂಡಿದ್ದೇವೆ, ಸರ್ಕಾರದಿಂದ ಇವತ್ತಿನವರೆಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ, ದಯವಿಟ್ಟು ನೀವೇ ಏನಾದ್ರೂ ಮಾಡಬೇಕು ಎಂದು ಮನವಿ ಮಾಡಿದ್ರು. ಇನ್ನೆಷ್ಟು ವರ್ಷ ಕಳೆದಮೇಲೆ ಅವರಿಗೆ ಸರ್ಕಾರ ಪರಿಹಾರ ಕೊಡೋದು? ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸರ್ಕಾರ ರೋಗಿಗಳಿಗೆ ಆಸ್ಪತ್ರೆ, ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಲ್ಲ, ಸತ್ತವರಿಗೆ ಪರಿಹಾರ ನೀಡಿಲ್ಲ, ಸತ್ತವರ ಸಂಖ್ಯೆಯಲ್ಲೂ ಸುಳ್ಳು ಹೇಳಿದ್ರು, ಔಷಧಿ, ವೆಂಟಿಲೇಟರ್, ಮಾಸ್ಕ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ್ರು. ಇಂತಹಾ ನಿರ್ಲಜ್ಜ, ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿರಲಿಲ್ಲ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯೂ ವರ್ಗಾವಣೆ ಪಡೆಯಲು ಸಾಧ್ಯವಿಲ್ಲ, ಕಡತಗಳು ಇರುವ ಜಾಗದಿಂದ ಅಲ್ಲಾಡಲ್ಲ, ಅಭಿವೃದ್ಧಿ ಕೆಲಸಗಳು ಮುಂದಕ್ಕೆ ಸಾಗಲ್ಲ. ಇದು ಲಂಚ, ಲಂಚ, ಬರೀ ಲಂಚಕೋರರ ಸರ್ಕಾರ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಕೊರೊನಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೊಟ್ಟಿಲ್ಲ. ಇದೇ ಸರ್ಕಾರ ಮುಂದುವರೆದರೆ ಮುಂದೆ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕೊಡೋಕು ಹಣವಿರಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ವಿಚಾರಗಳಿಂದಾಗಲೀ, ಸಾಧನೆಗಳಿಂದಾಗಲೀ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬುದು ಅರಿವಾಗಿದೆ. ಹೀಗಾಗಿ ಮತಗಳನ್ನು ಹಣದ ಮೂಲಕ ಖರೀದಿಸಿ ಚುನಾವಣೆ ತಯಾರಿಯಲ್ಲಿದ್ದಾರೆ.
ಈ ಬಗ್ಗೆ ಮತದಾರರು ಜಾಗೃತರಾಗಿ, ವಿವೇಚನೆಯಿಂದ ತಮ್ಮ ಮತ ನೀಡಬೇಕು.

ಸ್ವಯಂ ಪ್ರೇರಿತರಾಗಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಲು ಸಂವಿಧಾನದಲ್ಲಿ ಅವಕಾಶವಿದೆ. ಒಂದು ವೇಳೆ ಬಲವಂತವಾಗಿ ಮತಾಂತರ ನಡೆಯುತ್ತಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತಾಂತರ ನಿಷೇಧ ಕಾಯ್ದೆ ಬಿಜೆಪಿಯ ಮತ ಕ್ರೋಢೀಕರಣ ಕಾರ್ಯತಂತ್ರದ ಒಂದು ಭಾಗ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ. ತಮ್ಮ ಸರ್ಕಾರದಿಂದ ಜನ ರೋಸಿಹೋಗಿರುವುದನ್ನು ಅರಿತ ಬಿಜೆಪಿಯವರು ಮತ್ತೆ ಹಿಂದುತ್ವದ ಮೂಲಕ ಮತಗಳಿಕೆ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನನ್ನ 5 ವರ್ಷಗಳ ಆಡಳಿತದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಯಾವ ಮಾನದಂಡವನ್ನು ಉಲ್ಲಂಘಿಸದೆ ಸುಸ್ಥಿರ ಆಡಳಿತ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಬಿಜೆಪಿಯವರು ತಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಲಿ ನೋಡೋಣ. ನನಗೆ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಅಥವಾ ಜೆಡಿಎಸ್ ಪಕ್ಷದ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ನಾನು ವಿಷಯಾಧಾರಿತವಾಗಿ, ಸೈದ್ಧಾಂತಿಕವಾಗಿ ಅವರನ್ನು ವಿರೋಧ ಮಾಡಿದ್ದೇನೆ. ನನಗೆ ಜ್ವರವೂ ಇಲ್ಲ, ಜೆಡಿಎಸ್ ಹೆಸರು ಜಪ ಮಾಡಿದ್ರೆ ಜ್ವರ ವಾಸಿಯಾಗೋದು ಇಲ್ಲ. ಆರ್.ಎಸ್.ಎಸ್ ಗೆ ಬೈಯ್ಯುವ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸಿದ್ದು, ಚುನಾವಣೆಯಲ್ಲಿ ಒಳ‌ಒಪ್ಪಂದ ಮಾಡಿಕೊಳ್ಳೋದನ್ನು ವಿರೋಧಿಸಿದ್ದೇನೆ. ಕುಮಾರಸ್ವಾಮಿ ಬಳಿ ಇದಕ್ಕೆ ಸಮರ್ಪಕ ಉತ್ತರ ಇದ್ದರೆ ಕೊಡಲಿ. ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇ ನಮ್ಮ ಸರ್ಕಾರ. ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಪಾದಯಾತ್ರೆಗೆ ನಾನು ಹೋಗ್ತೇನೆ, ಡಿ.ಕೆ ಶಿವಕುಮಾರ್ ಅವರೂ ಬರ್ತಾರೆ. ರಾಜ್ಯದ ಹಿತಾಸಕ್ತಿಯ ಕಾಳಜಿ ಇದ್ದವರು ಯಾರಾದ್ರೂ ಬರಬಹುದು.

Leave a Comment

Your email address will not be published. Required fields are marked *

Translate »
Scroll to Top