ಶಾಸಕ ಬಿ.ನಾಗೇಂದ್ರರಿಗೆ ಸಚಿವ ಸ್ಥಾನ ಫಿಕ್ಸ್

ಬಳ್ಳಾರಿ: ಬಹು ನಿರೀಕ್ಷಿತ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ನಾಳೆ ಶನಿವಾರ ಮೇ.೨೭ರಂದು ನಡೆಯುವುದು ಖಾತರಿಯಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಖಚಿತ ಪಡಿಸಿವೆ.


ಕಳೆದ ಮೇ.10 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ನಿಚ್ಚಳ ಬಹುಮತ ಪಡೆದು ಆಧಿಕಾರ ಸೂತ್ರ ಹಿಡಿದಿದ್ದು ಈಗ ಇತಿಹಾಸ.
ಅಂತೆಯೇ ಕಾಂಗ್ರೆಸ್ ಸರ್ಕಾರದ ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಜೊತೆಗೆ ೮ ಜನ ಹಿರಿಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಯಾಗಿದೆ. ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಗೆ ಭಾರೀ ಕಸರತ್ತು- ಸರ್ಕಸ್ ನಡೆದು, ಅಂತೂ-ಇಂತೂ ನಾಳೆ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ.
ಅಂತೆಯೇ ಎಲ್ಲರ ನಿರೀಕ್ಷೆಯಂತೆ, ಈಗಾಗಲೇ ರಾಜಕೀಯ ವಲಯದಲ್ಲಿನ ಅನಿಸಿಕೆಯಂತೆ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗುವುದು ನಿಶ್ಚಿತವಾಗಿದೆ. ನಾಳೆ ಶನಿವಾರ ಬೆಳಿಗ್ಗೆ 11.45ಕ್ಕೆ ಕಾಂಗ್ರೆಸ್‌ನ 23 ರಿಂದ 24 ಜನ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಬಳ್ಳಾರಿಯ ಬಿ.ನಾಗೇಂದ್ರ ಅವರಿಗೂ ‘ಲಕ್ ಒಲಿದಿದೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಎರಡನೇ ಬಾರಿಯೂ ಸೇರಿದಂತೆ ಈವರೆಗೆ ನಿರಂತರವಾಗಿ ‘ನಾಲ್ಕು’ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ‘ಸೋಲಿಲ್ಲದ ಸರದಾರ’ ಎಂದೇ ಖ್ಯಾತಿ ಪಡೆದಿರುವ ಬಿ.ನಾಗೇಂದ್ರ ಅವರು ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜ್ಯಮಟ್ಟದ ನಾಯಕರೆಂದೇ ಗುರುತಿಸಿಕೊಂಡಿರುವ ಬಿ.ಶ್ರೀರಾಮುಲು ಅವರನ್ನು ಪರಾಭವಗೊಳಿಸಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
2008ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಚುನಾಯಿತರಾದ ಬಿ.ನಾಗೇಂದ್ರ ಅವರು ಆನಂತರ, 2013ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ದಾಖಲೆ ಮೆರೆದಿದ್ದರು. ಆನಂತರ 2018ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ನಾಗೇಂದ್ರ, ಮೇ.೧೦ರಂದು ನಡೆದ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಅವರನ್ನು ಮಣಿಸಿ, ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಿ, ಒಟ್ಟಾರೆಯಾಗಿ ಸತತವಾಗಿ ನಾಲ್ಕನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯಶಸ್ಸಿನ ‘ಬೌಂಡರಿ’ ಬಾರಿಸಿದ್ದಾರೆ.
ಬಿ.ಕಾಂ ಪದವೀಧರರಾಗಿರುವ ಬಿ.ನಾಗೇಂದ್ರ ಅವರು ಇದೇ ಪ್ರಪ್ರಥಮ ಬಾರಿಗೆ ಸಚಿವರಾಗುವ ಅವಕಾಶ ನಿಶ್ಚಿತವಾಗಿದೆ. ಇಂದು ರಾತ್ರಿ ಅಧಿಕೃತಕವಾಗಿ ಈ ಬಗ್ಗೆ ಪ್ರಕಟಣೆ ಹೊರಡುವ ನಿರೀಕ್ಷೆ ಇದೆ.
ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಪಕ್ಕಾ ಆಗಿರುವುದರಿಂದ, ಅವರ ಸಾವಿರಾರು ಬೆಂಗಲಿಗರು, ಕಾಂಗ್ರೆಸ್ ಕಾರ್ಯಕರ್ತರು ಇಂದು ಸಂಜೆ, ರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ಗೊತ್ತಾಗಿದೆ.

Leave a Comment

Your email address will not be published. Required fields are marked *

Translate »
Scroll to Top