ಬೆಂಗಳೂರು: ಶಿಕ್ಷಣದ ಜೊತೆ ದೇಶಾಭಿಮಾನ ಮೂಡಿಸುವ ನೈತಿಕ ಶಿಕ್ಷಣವನ್ನು ಬೋಧಿಸಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂದು ಮಾಜಿ ಸೈನಿಕ, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಪಿ.ದಿವ್ಯಪ್ರಸಾದ್ ಹೇಳಿದ್ದಾರೆ.
ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ 2024–25 ರ ಸಾಲಿನ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ವಿಜೇತರಾದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಪೋಷಕರು ಮತ್ತು ಕಾಲೇಜಿಗೆ ಕೀರ್ತಿ ತರುತ್ತಿರುವುದು ಸಂತಸದ ಸಂಗತಿಯಾದರೂ ನೈತಿಕ ಶಿಕ್ಷಣ, ದೇಶಾಭಿಮಾನ ಮೂಡಿಸುವ, ಸಮಾಜದಲ್ಲಿ ಮಹಿಳೆಯರು, ಬಡವರು, ನಿರ್ಗತಿಕರಿಗೆ ಸಮಾನತೆಯ ನ್ಯಾಯ ದೊರಕಿಸಿಕೊಡುವ ಚಿಂತನೆಗಳನ್ನು ಬಿತ್ತಬೇಕು. ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಶಕ್ತಿ, ಸಾಮರ್ಥ್ಯ ಇದ್ದು, ಇದು ಬೆಳಕಿಗೆ ಬರಲು ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಮೌಲ್ಯಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಬೇಕು. .ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಮನೋಧರ್ಮ ಬದಲಾಗುತ್ತದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸಹಕಾರ್ಯದರ್ಶಿ ಎಂ.ಎಸ್.ನಟರಾಜ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಿ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಕೀರ್ತಿವಂತರಾಗಬೇಕು. ಸರ್ವಜನಾಂಗದ ಶಾಂತಿಯ ಸಂದೇಶ ಸಾರುವ ದಾರ್ಶನಿಕರ ಜೀವನಗಾಥೆಯನ್ನು ಓದಬೇಕು ಎಂದರು.
ಪ್ರಾಂಶುಪಾಲ ಪ್ರೊ.ಆರ್.ವಿ.ಮಂಜುನಾಥ್ ಮಾತನಾಡಿ, ಶೈಕ್ಷಣಿಕ ಬದುಕಿನಲ್ಲಿ ಅತ್ಯತ್ತಮ ಸಾಧನೆ ಎಷ್ಟು ಮುಖ್ಯವೋ ಸಾರ್ವಜನಿಕ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಬೆಳೆಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ಎಸ್.ರಾಮಲಿಂಗೇಶ್ವರ, ಪ್ರೊ.ಮಧು.ಬಿ.ಎನ್, ಅಧ್ಯಾಪಕರಾದ ಗುರುರಾಜ್, ಸಹನಾ.ಎಸ್, ಕಾವ್ಯ.ವಿ, ಜೀವಿತಾ ಮುಂತಾದವರಿದ್ದರು. 300 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.