ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಸಂಪುಟ ಪುನರ್ ರಚನೆ ಕುರಿದಂತೆ ಮಹತ್ವದ ಮಾತುಕತೆ ನಡೆಸಿದರು.
ಸಂಪುಟ ವಿಸ್ತರಣೆ ಕುರಿತಂತೆ ಮೊನ್ನೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆ ಕುರಿತಂತೆ ಮಾತುಕತೆ ನಡೆಸಿ ತಾತ್ವಿಕ ಒಪ್ಪಿಗೆ ಪಡೆದಿದ್ದರು. ಈ ಸಂಬಂಧ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ, ಖರ್ಗೆ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.
ಇದರ ಜೊತೆಗೆ ಇತ್ತೀಚಿನ ರಾಜಕೀಯ ಬೆಳವಣಿಗೆ, ಪಕ್ಷ ಸಂಘಟನೆ, ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಕುರಿತು ಸಿದ್ದರಾಮಯ್ಯ ಖರ್ಗೆ ಅವರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಸಂಪುರ ಪುನರ್ ರಚನೆ ಸಂಬಂಧ ದೆಹಲಿಯಲ್ಲಿ ಖರ್ಗೆ ಅವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಚರ್ಚೆ ನಡೆಸಿದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಭರ್ಜರಿ ಪೈಪೋಟಿ ಶುರುವಾಗಿದೆ. ಮಂತ್ರಿ ಸ್ಥಾನ ಗಿಟ್ಟಿಸಲು ದೆಹಲಿಯಲ್ಲಿ ಹಲವರು ಬಿರುಸಿನ ಲಾಬಿ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಆರ್.ವಿ. ದೇಶ್‌ಪಾಂಡೆ, ನರೇಂದ್ರ ಸ್ವಾಮಿ, ಬಿ. ನಾಗೇಂದ್ರ, ಬಿ.ಕೆ. ಹರಿಪ್ರಸಾದ್, ಅಪ್ಪಾಜಿಗೌಡ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ, ಸಲೀಮ್ ಅಹಮ್ಮದ್, ಶಿವಲಿಂಗೇಗೌಡ, ರೂಪ ಶ್ರೀಧರ್, ಯುಟಿ ಖಾದರ್, ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ. ಆದರೆ ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬಗ್ಗೆ, ಇಂದು ಖರ್ಗೆ ಜೊತೆ ನಡೆಯುವ ಮಾತುಕತೆ ವೇಳೆ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ರಾಜ್ಯ ರಾಜಕಾರಣ ದೆಹಲಿ ಅಂಗಳ ತಲುಪಿರುವ ಹಿನ್ನಲೆಯಲ್ಲಿ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿವೆ. ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಸಚಿವರ ಸ್ಥಾನ ಗಿಟ್ಟಿಸಲು ಲಾಬಿಯು ನಡೆಯುತ್ತಿದೆ. ಮತ್ತೊಂದೆಡೆ ಕೆಲವರಿಗೆ ಮಂತ್ರಿಸ್ಥಾನ ಕಳೆದುಕೊಳ್ಳುವ ಭೀತಿಯು ಎದುರಾಗಿದೆ.
ಕೆಲ ಮಂತ್ರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಹಿನ್ನೆಲೆಯಲ್ಲಿ ಅಸಮರ್ತ ಸಚಿವರನ್ನು ಕೈಬಿಡುವ ಬಗ್ಗೆಯೂ ಗಂಭೀರ ಚಿಂತನೆಗಳು ನಡೆದಿವೆ. ಯಾರನ್ನೂ ಸಂಪುಟದಿಂದ ಕೈ ಬಿಡಬೇಕು ಹಾಗೂ ಒಂದು ವೇಳೆ ಸಂಪುಟ ಪುನರ್ ರಚನೆಯಾದರೆ ಯಾರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆಯೂ ಖರ್ಗೆ ಜೊತೆ ಮುಖ್ಯಮಂತ್ರಿಗಳು ಗಹನ ಚರ್ಚೆ ನಡೆಸಲಿದ್ದಾರೆ, ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಂಪುಟ ಪುನರ್ ರಚನೆಗೆ ಅವಕಾಶ ಸಿಗದಿದ್ದರೆ, ಕಾಲಿ ಉಳಿದಿರುವ ೨ ಸ್ಥಾನಗಳನ್ನ ಭರ್ತಿ ಮಾಡುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಕೆ.ಎನ್. ರಾಜಣ್ಣ ಹಾಗೂ ನಾಗೇಂದ್ರ ರಾಜಿನಾಮೆಯಿಂದ ತೆರವಾಗಿದೆ. ಈ ಎರಡು ಸ್ಥಾನಗಳ ಭರ್ತಿ ಇಲ್ಲವೇ ಸಂಪುಟ ಪುನರ್ ರಚನೆ ಮಾಡಬೇಕೆ ಎಂಬ ಬಗ್ಗೆ ವರಿಷ್ಠರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.



