ಲೀಡ್ಸ್‌ನಲ್ಲಿ ಮೊದಲ ದಿನವೇ ಇಗ್ಗ ಮುಗ್ಗ ಹೊಡೆದ ಜೈಶ್ವಾಲ್ , ಗಿಲ್ !

ಲೀಡ್ಸ್‌ನಲ್ಲಿ ಮೊದಲ ದಿನವೇ ಇಗ್ಗ ಮುಗ್ಗ ಹೊಡೆದ ಜೈಶ್ವಾಲ್ , ಗಿಲ್ !

Kannada Nadu
ಲೀಡ್ಸ್‌ನಲ್ಲಿ ಮೊದಲ ದಿನವೇ ಇಗ್ಗ ಮುಗ್ಗ ಹೊಡೆದ ಜೈಶ್ವಾಲ್ , ಗಿಲ್ !

ಲೀಡ್ಸ್‌ನಲ್ಲಿ ಮೊದಲ ದಿನವೇ ಇಗ್ಗ ಮುಗ್ಗ ಹೊಡೆದ ಜೈಶ್ವಾಲ್ , ಗಿಲ್ !

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಯುವ ಭಾರತ ತಂಡ ಮೊದಲ ದಿನ ಉತ್ತಮ ಆರಂಭ ಪಡೆದಿದೆ. ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್‌ಮನ್ ಗಿಲ್ ಶತಕಗಳ ಸಹಾಯದಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ. ಕೆ.ಎಲ್‌.ರಾಹುಲ್, ರಿಷಭ್ ಪಂತ್ ಕೂಡ ಮಿಂಚಿದರು.

ಲೀಡ್ಸ್: ಹಲವು ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ಟೆಸ್ಟ್‌ ಅಗ್ನಿಪರೀಕ್ಷೆಗೆ ಇಳಿದಿರುವ ಯುವ ಟೀಂ ಇಂಡಿಯಾ, ಮೊದಲ ದಿನ ಭರ್ಜರಿ ಯಶಸ್ಸು ಪಡೆದಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಆಡಿ ಅನುಭವವೇ ಇಲ್ಲದ ಕೆಲ ಆಟಗಾರರೊಂದಿಗೆ ಕಣಕ್ಕಿಳಿದರೂ ತಂಡ ಆತಿಥೇಯರನ್ನು ಕಟ್ಟಿಹಾಕಲು ಯಶಸ್ವಿಯಾಗಿದೆ. 5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಮೊದಲ ದಿನ ಟೀಂ ಇಂಡಿಯಾ 03 ವಿಕೆಟ್‌ಗೆ 359 ರನ್‌ ಕಲೆಹಾಕಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ಆಯ್ಕೆ ಮಾಡಿಕೊಂಡಿದ್ದು ಫೀಲ್ಡಿಂಗ್‌. ಇದರಿಂದ ಭಾರತಕ್ಕೆ ಹಿನ್ನಡೆಯೇನೂ ಆಗಲಿಲ್ಲ. ಆರಂಭಿಕ ಜೋಡಿಯ ಅತ್ಯಾಕರ್ಷಕ ಜೊತೆಯಾಟ, ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭ್‌ಮನ್‌ ಗಿಲ್‌ರ ಮನಮೋಹಕ ಶತಕ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ರ ಮಿಂಚಿನ ಆಟ ತಂಡವನ್ನು ಮೊದಲ ದಿನ ಪ್ರಾಬಲ್ಯ ಸಾಧಿಸುವಂತೆ ಮಾಡಿತು.

ಇಂಗ್ಲೆಂಡ್‌ ವೇಗಿಗಳ ಆರಂಭಿಕ ಸ್ಪೆಲ್ಅನ್ನು ಸಮರ್ಥವಾಗಿ ಎದುರಿಸಿದ ರಾಹುಲ್‌-ಜೈಸ್ವಾಲ್‌ ಜೋಡಿ 24.5 ಓವರ್‌ಗಳಲ್ಲಿ 91 ರನ್‌ ಜೊತೆಯಾಟವಾಡಿತು. ಆದರೆ ಊಟದ ವಿರಾಮಕ್ಕೆ ಅಲ್ಪ ಮೊದಲು ಭಾರತಕ್ಕೆ ಆಘಾತ ಕಾದಿತ್ತು. ಬ್ರೈಡನ್‌ ಕಾರ್ಸ್‌ ಎಸೆತದಲ್ಲಿ ಕವರ್‌ ಡ್ರೈವ್‌ ಹೊಡೆತಕ್ಕೆ ಮುಂದಾದ ರಾಹುಲ್‌, ಸ್ಲಿಪ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅವರು 78 ಎಸೆತಕ್ಕೆ 42 ರನ್‌ ಸಿಡಿಸಿದರು. ಪಾದಾರ್ಪಣಾ ಪಂದ್ಯವಾಡಿದ ಸಾಯಿ ಸುದರ್ಶನ್‌ ಮೇಲೆ ನಿರೀಕ್ಷೆ ಇತ್ತಾದರೂ, ಅದನ್ನು ಅವರು ಉಳಿಸಿಕೊಳ್ಳಲಿಲ್ಲ. 4 ಎಸೆತ ಎದುರಿಸಿದರೂ ಸೊನ್ನೆಗೆ ಔಟಾದರು.ಜೈಸ್ವಾಲ್‌ ಕಮಾಲ್: ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಉತ್ತಮ ದಾಖಲೆ ಹೊಂದಿರುವ 23 ವರ್ಷದ ಯಶಸ್ವಿ ಜೈಸ್ವಾಲ್‌, ಚೊಚ್ಚಲ ಇಂಗ್ಲೆಂಡ್‌ ಸರಣಿಯಲ್ಲೂ ಅಬ್ಬರಿಸಿದರು. ವೃತ್ತಿಬದುಕಿನ 5ನೇ ಶತಕ ಹೊಡೆದ ಅವರು, ವಿದೇಶದಲ್ಲಿ 3ನೇ ಶತಕ ದಾಖಲಿಸಿದರು. 3ನೇ ವಿಕೆಟ್‌ಗೆ ಗಿಲ್‌ ಜೊತೆಗೂಡಿ 129 ರನ್‌ ಸೇರಿಸಿದರು. 2ನೇ ಅವಧಿಯಲ್ಲಿ ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳಲಿಲ್ಲ. ಆದರೆ 3ನೇ ಅವಧಿಯ ಆರಂಭದಲ್ಲಿ ಈ ಜೋಡಿ ಬೇರ್ಪಟ್ಟಿತು. ಜೈಸ್ವಾಲ್‌ 159 ಎಸೆತಗಳಲ್ಲಿ 101 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ರ ಮ್ಯಾಜಿಕ್‌ ದಾಳಿಗೆ ಬೌಲ್ಡ್‌ ಆಗಿ ನಿರ್ಗಮಿಸಿದರು.

ನಾಯಕ-ಉಪನಾಯಕ ಮಿಂಚು: 221 ರನ್‌ಗೆ 3 ವಿಕೆಟ್‌ ಬಿದ್ದ ಬಳಿಕ ತಂಡಕ್ಕೆ ಮತ್ತಷ್ಟು ಆಸರೆಯಾಗಿದ್ದು ನಾಯಕ ಗಿಲ್‌ ಹಾಗೂ ಉಪನಾಯಕ ರಿಷಭ್‌ ಪಂತ್‌. 3ನೇ ಅವಧಿಯಲ್ಲಿ ಈ ಜೋಡಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿತು. ವೇಗವಾಗಿಯೇ ಬ್ಯಾಟ್‌ ಬೀಸಿದ ಯುವ ಬ್ಯಾಟರ್‌ಗಳು ಶತಕದ ಜೊತೆಯಾಟವನ್ನೂ ನೀಡಿದರು. ಗಿಲ್‌ 140 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ರಿಷಭ್‌, ಅರ್ಧಶತಕ ಬಾರಿಸಿ ಮಿಂಚಿದರು.

ವಿಜಯ್‌ ಹಜಾರೆ, ಸುನಿಲ್, ಕೊಹ್ಲಿ ಸಾಲಿಗೆ ಸೇರಿ ಗಿಲ್‌

ಭಾರತದ ನಾಯಕರಾಗಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ 4ನೇ ಆಟಗಾರ ಎಂಬ ಖ್ಯಾತಿಗೆ ಗಿಲ್‌ ಪಾತ್ರರಾಗಿದ್ದಾರೆ. ಈ ಮೊದಲು 1951ರಲ್ಲಿ ವಿಜಯ್‌ ಹಜಾರೆ ಇಂಗ್ಲೆಂಡ್ ವಿರುದ್ಧ, 1976ರಲ್ಲಿ ಸುನಿಲ್‌ ಗವಾಸ್ಕರ್‌ ನ್ಯೂಜಿಲೆಂಡ್‌ ವಿರುದ್ಧ, 2014ರಲ್ಲಿ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ಶತಕ ಬಾರಿಸಿದ್ದರು.

8 ವರ್ಷ ಬಳಿಕ ಕರುಣ್‌ ಭಾರತಕ್ಕೆ ಕಮ್‌ಬ್ಯಾಕ್

ಕರ್ನಾಟಕದ ಕರುಣ್‌ ನಾಯರ್‌ 8 ವರ್ಷಗಳ ಬಳಿಕ ಭಾರತ ತಂಡಕ್ಕೆ ಹಿಂದಿರುಗಿದರು. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ಕರುಣ್‌, ಅದೇ ಸರಣಿಯಲ್ಲಿ ಚೆನ್ನೈನಲ್ಲಿ ತ್ರಿಶತಕ(ಔಟಾಗದೆ 3030 ರನ್‌) ಬಾರಿಸಿದ್ದರು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ವಿಫಲವಾಗಿದ್ದರಿಂದ ಕರುಣ್‌ ತಂಡದಿಂದ ಹೊರಬಿದ್ದಿದ್ದರು. ಕಳೆದ ಋತುವಿನಲ್ಲಿ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಈಗ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು

ಭಾರತ ತಂಡದಲ್ಲಿ ಹಲವು ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಒಟ್ಟಿಗೇ ಕಣಕ್ಕಿಳಿದರು. ಬ್ಯಾಟರ್‌ ಕೆ.ಎಲ್‌.ರಾಹುಲ್‌, ಕರುಣ್ ನಾಯರ್‌ ಜೊತೆ ವೇಗದ ಬೌಲರ್‌ ಪ್ರಸಿದ್ಧ್‌ ಕೃಷ್ಣ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";