ಸಿಎಂ, ಗೃಹ ಸಚಿವ, ಡಿಜಿಪಿಗೆ ಪತ್ರ, ವಿಶೇಷ ತನಿಖಾ ತಂಡ ನೇಮಿಸಲು ಆಗ್ರಹ
ಮಂಗಳೂರು: ಎನ್ಆರ್ ಐ ಉದ್ಯಮಿಯಾಗಿದ್ದ ಮುಂಡ್ಕೂರು ರಾಮದಾಸ್ ಕಾಮತ್ ದಿಢೀರ್ ಸಾವಿನ ಬಗ್ಗೆ ಮತ್ತೊಬ್ಬ ಎನ್ಆರ್ ಐ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಆಘಾತ ವ್ಯಕ್ತಪಡಿಸಿದ್ದಾರೆ. ದುಬೈನಲ್ಲಿ ವ್ಯವಹಾರದ ಜೊತೆಗೆ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ರಾಮದಾಸ್ ಕಾಮತ್ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಅಂತಹ ವ್ಯಕ್ತಿ ದಿಢೀರ್ ಆಗಿ ಸಾವಿಗೆ ಶರಣಾಗಿದ್ದನ್ನು ನಂಬಲಾಗುತ್ತಿಲ್ಲ. ಇದರ ಹಿಂದೆ ಬೇರೇನೋ ಕಾರಣ ಇದೆ. ಸಾವಿನ ಪ್ರಕರಣದಲ್ಲಿ ಮೂರನೇ ವ್ಯಕ್ತಿಗಳ ಕೈವಾಡ ಇದ್ದಿರಲೇಬೇಕು. ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಬಿ.ಆರ್. ಶೆಟ್ಟಿ ತಮ್ಮ ವಕೀಲರ ತಂಡದ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಅವರಿಗೆ ಬಿಆರ್ ಶೆಟ್ಟಿ ಪರವಾಗಿ ವಕೀಲರ ತಂಡ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಬೇಕೆಂದು ಆಗ್ರಹ ಮಾಡಿದೆ. ಮುಂಡ್ಕೂರು ರಾಮದಾಸ್ ಕಾಮತರು ಮಲ್ಟಿ ಮಿಲಿಯನೇರ್ ಆಗಿದ್ದು, ಹಲವಾರು ಕಡೆ ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ದೇವಸ್ಥಾನ, ಮಠಗಳಿಗೆ ಕೋಟ್ಯಂತರ ರೂಪಾಯಿ ದಾನ ಮಾಡಿದ್ದಾರೆ.
ಇತ್ತೀಚೆಗೆ ಪತ್ರಿಕೆಯಲ್ಲಿ ರಾಮದಾಸ ಕಾಮತ್ ನಿಧನರಾದ ಬಗ್ಗೆ ಜಾಹೀರಾತು ಬಂದಿದ್ದು ನೋಡಿ ಶಾಕ್ ಆಗಿತ್ತು. ಪರಿಚಿತರಲ್ಲಿ ಮಾಹಿತಿ ಕೇಳಿದಾಗ, ಆತ್ಮಹತ್ಯೆಯಿಂದ ಸಾವಾಗಿದೆ ಎಂದು ತಿಳಿದುಬಂತು. ಆದರೆ 50 ವರ್ಷಗಳ ಸುದೀರ್ಘ ಕಾಲದಲ್ಲಿ ಅವರನ್ನು ತಿಳಿದಿದ್ದು, ರಾಮದಾಸ ಕಾಮತ್ ಸಾಯುವ ಮನಸ್ಥಿತಿಯವರಲ್ಲ. ಜೀವನದಲ್ಲಿ ಉತ್ತಮ ಶಿಸ್ತು ಮತ್ತು ದೃಢ ಮನಸ್ಸು ಉಳ್ಳವರಾಗಿದ್ದರು. ಕಾಮತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವುದನ್ನು ನಂಬಲಾಗದು. ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆದು ಸತ್ಯಾಂಶ ಹೊರಗೆ ಬರಬೇಕಿದೆ. ಈಗಿನ ಕಾಲದಲ್ಲಿ ಸಿಸಿಟಿವಿ, ಮೊಬೈಲ್ ಕರೆ ಮಾಹಿತಿ, ಹಲವು ಮಾದರಿಯ ಸಾಕ್ಷ್ಯಗಳು ಸಿಗುತ್ತವೆ. ಪೊಲೀಸರು ತನಿಖೆ ನಡೆಸಿದರೆ, ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಯಾರಾದ್ರೂ ಅವರಿಗೆ ಮಾನಸಿಕ ಒತ್ತಡ ಕೊಟ್ಟು ಸಾಯಲು ಪ್ರೇರಣೆ ನೀಡಿದ್ದಾರೆಯೇ, ಕೊಲೆ ಮಾಡಿದ್ದಾರೆಯೇ ಎಂಬುದನ್ನು ಪತ್ತೆ ಮಾಡಬೇಕಿದೆ.
ಇದಕ್ಕಾಗಿ ಪ್ರತ್ಯೇಕ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಬೇಕಾಗಿದೆ. ಕೊನೆಯ ಮೂರು ತಿಂಗಳಲ್ಲಿ ರಾಮದಾಸ್ ಕಾಮತ್ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ತನಿಖೆ ಮಾಡಬೇಕಿದೆ. ಸಿಸಿಟಿವಿ ಮಾಹಿತಿಗಳು ಪೊಲೀಸರಿಗೆ ಸತ್ಯಾಂಶ ಹೊರ ತೆಗೆಯಲು ಪ್ರಬಲ ಸಾಕ್ಷ್ಯವಾಗಲಿದೆ. ಈಗಾಗಲೇ ಸಾವಾಗಿ 12 ದಿನಗಳು ಕಳೆದಿದ್ದು, ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಆಗದಿರುವುದನ್ನು ಗಮನಿಸಿದ್ದೇನೆ. ಪ್ರಕರಣದ ಗಂಭೀರತೆ ಪರಿಗಣಿಸಿ ನಿಗದಿತ ಸೆಕ್ಷನ್ ಪ್ರಕಾರ ಕೇಸು ದಾಖಲಾಗಬೇಕಿದೆ. ಕಾನೂನು ಪ್ರಕಾರ, ತನಿಖೆ ನಡೆಸುವಂತೆ ಆಗ್ರಹಿಸಿ ಈ ನೋಟೀಸ್ ನೀಡುತ್ತಿದ್ದೇವೆ ಎಂದು ಬಿಆರ್ ಶೆಟ್ಟಿ ಪರವಾಗಿ ಕಾಮತ್ ಜ್ಯೂರೀಸ್ ಎನ್ನುವ ಬೆಂಗಳೂರಿನ ಹಿರಿಯ ವಕೀಲರ ತಂಡ ಮುಖ್ಯಮಂತ್ರಿ, ಸಚಿವರು, ಪೊಲೀಸ್ ಅಧಿಕಾರಿಗಳನ್ನು ಪ್ರತಿವಾದಿಯಾಗಿಸಿ ನೋಟೀಸ್ ನೀಡಿದೆ.
ಒಂದ್ವೇಳೆ, ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸದೇ ಇದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರಲಿದ್ದು, ನಿಮ್ಮದೇ ಖರ್ಚಿನಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವ ನಿರ್ಣಯಕ್ಕೆ ಬರಬೇಕಾದೀತು ಎಂದು ವಕೀಲರು ಎಚ್ಚರಿಸಿದ್ದಾರೆ. ಮುಂಡ್ಕೂರು ರಾಮದಾಸ್ ಕಾಮತ್ ಕೋಟ್ಯಂತರ ಆಸ್ತಿ ಹೊಂದಿದ್ದ ಎನ್ಆರ್ ಐ ಉದ್ಯಮಿಯಾಗಿದ್ದು ಸೆ.17ರಂದು ಮಂಗಳೂರಿನ ರಥಬೀದಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸಾವಿನ ಬಗ್ಗೆ ತೀವ್ರ ಶಂಕೆ, ಸಂಶಯಗಳು ಕಾಡುತ್ತಿದ್ದು, ಪ್ರಕರಣ ನಡೆದು 15 ದಿನ ಕಳೆದರೂ ಒಟ್ಟು ವಿಚಾರವನ್ನು ಪೊಲೀಸರು ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳು ಸೇರಿ ಮುಚ್ಚಿ ಹಾಕಿವೆ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.