ಮೈಸೂರು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು  ಅಧಿಕೃತ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಈಶ್ವರ ಖಂಡ್ರೆ ಪ್ರಕಟಣೆ

ಮೈಸೂರು: ಅರಮನೆಗಳ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಇಂದು ಘೋಷಿಸಿದರು.

 

ಮೈಸೂರಿನ ಪೊಲೀಸ್ ಅಕಾಡಮಿಯ ಸಭಾಂಗಣದಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು, ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ ಮತ್ತು ಬೆಂಕಿಯಲ್ಲಿ ಸುಟ್ಟರೆ ವಿನಾಶಕಾರಿ ಅಂಶಗಳನ್ನು ಗಾಳಿಯಲ್ಲಿ ಸೇರಿಸುವ  ಏಕ ಬಳಕೆ ಪ್ಲಾಸ್ಟಿಕ್ ನಿಂದ ಸಮಸ್ಯೆಗಳು ಹೆಚ್ಚುತ್ತಿದ್ದು, ಜೂ.5ರಂದು ವಿಶ್ವ ಪರಿಸರ ದಿನದಂದು ಘೋಷಿಸಿದ ರೀತ್ಯ ಮೈಸೂರು, ಬೀದರ್, ಗುಲ್ಬರ್ಗಾ, ತುಮಕೂರು ಮತ್ತು ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಸಿರು ವ್ಯಾಪ್ತಿ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸಲು ಪ್ರಾಣಾಣಿಕ ಪ್ರಯತ್ನ ಮಾಡಲಾಗುತ್ತಿದ್ದು,  ಈವರೆಗೆ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆಯ ಕಲಂ 17 ಮತ್ತು 33ರ ಅಡಿಯಲ್ಲಿ 5700 ಎಕರೆಗೂ ಹೆಚ್ಚು ಪ್ರದೇಶವನ್ನು ಮೀಸಲು ಅರಣ್ಯ ಮತ್ತು ರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ. ಜೊತೆಗೆ 2 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಸಿರು ವಲಯ ವ್ಯಾಪ್ತಿ ಹೆಚ್ಚಿಸಲು ಈ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸಲು ಸಂಕಲ್ಪಿಸಲು ತೀರ್ಮಾನಿಸಿ ಜೂನ್ 5ರಂದು ನಡೆದ ವಿಶ್ವ ಪರಿಸರ ದಿನದಂದು ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಈ ಘೋಷಣೆ ಮಾಡಲಾಗಿತ್ತು. ಜುಲೈ 1ರಂದು ಚಾಲನೆ ನೀಡಲಾದ ಈ ಸಾಲಿನ ವನಮಹೋತ್ಸವದಲ್ಲಿ ಸುಮಾರು 5 ಕೋಟಿ 6 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಇವುಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ, ಜೊತೆಗೆ ಈ ಸಸಿಗಳಲ್ಲಿ ಎಷ್ಟು ಬದುಕುಳಿಯುತ್ತಿವೆ ಎಂಬುದನ್ನು ತಿಳಿಯಲು ಆಡಿಟ್ ಕೂಡ ಮಾಡಿಸಲಾಗುತ್ತಿದ್ದು, ಡಿಸೆಂಬರ್ ನಲ್ಲಿಯೇ ವರದಿ ಕೈಸೇರಲಿದೆ ಎಂದರು.

 

ಇಷ್ಟು ವರ್ಷಗಳ ಕಾಲ ನೀರಲ್ಲಿ ಕರಗದ ಮತ್ತು ಜಲ ಮೂಲಗಳಿಗೆ ಹಾನಿ ಮಾಡಿ, ಜಲಚರಗಳ ಸಾವಿಗೆ ಕಾರಣವಾಗುತ್ತಿದ್ದ ಪಿಓಪಿ ಗಣೇಶ ಮೂರ್ತಿಗಳನ್ನು ಪೂಜಿಸದಂತೆ ಸುತ್ತೋಲೆ ಮಾತ್ರ ಹೊರಡಿಸಲಾಗುತ್ತಿತ್ತು. ಆದರೆ ನಾನು ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ ಸರ್ಕಾರದಿಂದ ಅಧಿಕೃತ ಆದೇಶವನ್ನೇ ಹೊರಡಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ರಾಜ್ಯದಾದ್ಯಂತ ಜಾರಿಗೆ ತರಲಾಗಿದ್ದು, ಈ ಬಾರಿಶೇ. 75ರಷ್ಟು ಪಿಓಪಿ ಗಣಪತಿ ಮೂರ್ತಿಗಳ ವಿಸರ್ಜನೆ ಕಡಿಮೆಯಾಗಿದೆ. ಇದರಿಂದ  ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಮಾರಾಟ ಹೆಚ್ಚಳವಾಗಿದೆ ಎಂದರು.

ರಾಜ್ಯ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, 6395 ಆನೆಗಳಿವೆ. ಹುಲಿಗಳ ಸಂಖ್ಯೆ 563 ಇದ್ದು ರಾಜ್ಯ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ವನ್ಯ ಜೀವಿಗಳ ಸಂಖ್ಯೆ ಹೆಚ್ಚಳವಾದಂತೆ ಅರಣ್ಯ ಪ್ರದೇಶವೂ ಹೆಚ್ಚಳವಾಗುವ ಅನಿವಾರ್ಯತೆ ಇದೆ. ಆದರೆ ಅರಣ್ಯ ಪ್ರದೇಶ ಕ್ಷೀಣಿಸಿರುವ ಪರಿಣಾಮ, ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷ ತಪ್ಪಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಆನೆಗಳು ಆಹಾರ ಮತ್ತು ನೀರು ಅರಸಿ ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣವೇ ನಿರ್ಣಾಯಕವಾಗಿದ್ದು ಇನ್ನೂ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲು ಸಮ್ಮತಿಸಿರುವ ಮುಖ್ಯಮಂತ್ರಿಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

 

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕರುಗಳಾದ ತನ್ವೀರ್ ಸೇಠ್ ಮತ್ತಿತರರರು ಪಾಲ್ಗೊಂಡಿದ್ದರು.

Facebook
Twitter
LinkedIn
WhatsApp
Print
Email
Telegram

Leave a Comment

Your email address will not be published. Required fields are marked *

Translate »
Scroll to Top