ಸಂಸ್ಕೃತಿ ಉಳಿಸಲು ವಚನ ಸಾಹಿತ್ಯ ಸಹಕಾರಿ: ಈಶ್ವರ ಖಂಡ್ರೆ

ಮೈಸೂರು: ಮಾತೆಯರು ತಮ್ಮ ಮಕ್ಕಳಿಗೆ ವಚನ ಸಾಹಿತ್ಯ ಬೋಧಿಸಿದರೆ, ಅವರು ಸಂಸ್ಕಾರವಂತರಾಗಿ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.

ಮೈಸೂರಿನ ಕಲಾ ಮಂದಿರದಲ್ಲಿಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಜನತೆ ಮಾದಕ ವಸ್ತುಗಳಿಗೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು,  ಮಕ್ಕಳಲ್ಲಿ ಸದ್ಗುಣ ಬೆಳೆಯಲು ಅವರಿಗೆ ಬಾಲ್ಯದಿಂದಲೇ ವಚನ ಸಾಹಿತ್ಯ ಕಲಿಸಬೇಕು ಎಂದು ಸಲಹೆ ನೀಡಿದರು.

 

ಬಸವಾದಿ ಪ್ರಮಥರು ಈ ಜಗತ್ತಿಗೆ ನೀಡಿರುವ ಕೊಡುಗೆ ಅನುಪಮವಾಗಿದೆ. ಕಾರ್ಲ್ ಮಾರ್ಕ್ಸ್ ನ ದಾಸ್ ಕ್ಯಾಪಿಟಲ್ ಬರುವ ಮೊದಲೆ ದುಡಿಮೆಗೆ ಬೆಲೆ ನೀಡಿ, ಜಾತ್ಯತೀತ ಸಮ ಸಮಾಜದ ಕಲ್ಪನೆಯನ್ನು ನೀಡಿದವರು ಬಸವಾದಿ ಪ್ರಮಥರು ಎಂದು ಹೇಳಿದರು.

ಕಾಯಕವೇ ಕೈಲಾಸ, ಇವ ನಮ್ಮವ ಎಂದು ಸಾರಿದ ಬಸವಣ್ಣನವರು ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿ ಕೊಟ್ಟಮೊದಲಿಗರು. ಅನುಭವ ಮಂಟಪ ಇದಕ್ಕೆ ಇಂದಿಗೂ ಸಾಕ್ಷಿಯಾಗಿದೆ ಎಂದರು.

ಜಾತಿರಹಿತ ಸಮಾಜದ ಕಲ್ಪನೆಯನ್ನು ಬಸವಣ್ಣನವರು ಹೊಂದಿದ್ದರು. ಆದರೆ ಇಂದಿಗೂ ಅದು ಸಾಕಾರವಾಗಿಲ್ಲ ಎಂದು ಹೇಳಿದರು.

 

ಈ ಸಮಾಜಕ್ಕೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದ್ದು, ಎಲ್ಲ ಜಾತಿ, ಜನಾಂಗ, ಧರ್ಮದವರಿಗೆ ಯಾವುದೇ ಭೇದವಿಲ್ಲದೆ, ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮಾಡುತ್ತಿರುವ ನಮ್ಮ ಮಠಗಳು ಜಗತ್ತಿಗೆ ಆದರ್ಶಪ್ರಾಯವಾಗಿವೆ ಎಂದರು.

ಸುತ್ತೂರು ಸಂಸ್ಥಾನದ ಶ್ರೀ  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವ, ಬುದ್ಧರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದಾರೆ. ಬಡ ಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ ನೀಡಿ ಯಶಸ್ವಿ 5 ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯನವರು ಈಗ ಮತ್ತೆ ಮುಖ್ಯಮಂತ್ರಿಗಳಾಗಿ ಬಡವರ ಕಲ್ಯಾಣಕ್ಕಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

 

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಗಣೇಶ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

Facebook
Twitter
LinkedIn
WhatsApp
Print
Email
Telegram
XING

Leave a Comment

Your email address will not be published. Required fields are marked *

Translate »
Scroll to Top