ಬಳ್ಳಾರಿ: ತಾಲೂಕಿನ ಹೊನ್ನಳ್ಳಿ ತಾಂಡಾದಲ್ಲಿರುವ ಪವಾಡಗಳ ಪವಾಡಪುರುಷ ಉಕ್ಕಡಗಾತ್ರಿ ಅಜ್ಜಯ್ಯನ 17ನೇ ವರ್ಷದ ಶ್ರಾವಣ ಮಾಸದ 2 ನೇ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣಾಭಿವೃದ್ಧಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ ಅವರು ನೂತನವಾಗಿ ನಿರ್ಮಾಣಗೊಂಡಿರುವ ಅಜ್ಜಯ್ಯನ ಗೋಪರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಉಕ್ಕಡಗಾತ್ರಿ ಅಜ್ಜಯ್ಯರ ಪರಮ ಶಿಷ್ಯರಾದ ಹೇಮಜ್ಜಯ್ಯ ಅವರ ದಿವ್ಯ ಸ್ಮರಣೆಯೊಂದಿಗೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಹಗರಿಬೊಮ್ಮನಹಳ್ಳಿ ನಂದಿಪುರ ಮಠದ ಡಾ.ಮಹೇಶ್ವರ ಮಹಾಸ್ವಾಮಿ, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಆಲೂರು ಮಂಡಲದ ಪುರವರ್ಗ ಹಿರೇಮಠದ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಹರಗುರುಶರಣರ ಅಮೃತ ಹಸ್ತದಿಂದ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಇದೇವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಗೋಪುರ ಕಳಸಾರೋಹಣ ಮಾಡಲಿದ್ದಾರೆ.
ಸಂಸದರಾದ ವೈ.ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯ ಸತೀಶ್, ಬಳ್ಳಾರಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಎರಿಸ್ವಾಮಿ, ಬಿ.ವೆಂಕಟರಾವ್, ಜಗನ್, ಸಂಡೂರಿನ ಗಣಿ ಮಾಲೀಕರಾದ ನಾಗನಗೌಡ, ಕೆಆರ್‍ಪಿಪಿ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರಗೌಡ, ಸ್ಪಾಂಜ್ ಅಂಡ್ ಐರನ್ ಕಂಪನಿಯ ಅಧ್ಯಕ್ಷ ಬಿ.ಶ್ರೀನಿವಾಸ ರಾವ್, ಹಲಕುಂದಿ ಗ್ರಾಪಂ ಅಧ್ಯಕ್ಷೆ ತಾಯಮ್ಮ ಬಸವರಾಜ್, ಉಪಾಧ್ಯಕ್ಷರಾದ ಸುವರ್ಣ ಹೊನ್ನೂರುಸ್ವಾಮಿ ಹಾಗೂ ಗ್ರಾಪಂ ನ ಸರ್ವ ಸದಸ್ಯರು, ಹೊನ್ನಳ್ಳಿ ತಾಂಡಾದ ಪಟೇಲ್ ರಾಮಾನಾಯ್ಕ್, ಸುಶೀಲಾನಗರದ ಗ್ರಾಪಂ ಅಧ್ಯಕ್ಷ ಅಂಬರೇಶ್ ನಾಯ್ಕ್, ಹಲಕುಂದಿ ಗ್ರಾಪಂ ನ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಬುಡಾ ಮಾಜಿ ನಿರ್ದೇಶಕ ಶಿವು ಸೇರಿದಂತೆ ಅನೇಕ ಗಣ್ಯಮಾನ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಮುನ್ನಾದಿನ ಅಂದರೆ, ಆ.27ರಂದು ಲೋಕಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶಿವಲಿಂಗ ಹಾಗೂ ಗೋಪುರ ಕಳಸ ಪ್ರತಿಷ್ಠಾಪನೆ ನೆರವೇರಿಸಲಾಗತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗಿನ ಜಾವ 4-30ರಿಂದ ಗುಗ್ಗರಹಟ್ಟಿಯ ಶಿವ ದೇವಸ್ಥಾನದ ನಾಗರಾಜ ಸ್ವಾಮಿ ಮತ್ತು ತಂಡದವರು ಈ ಪೂಜಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸಂಜೆ 5ರಿಂದ ಕುರುಬರ ಓಣಿಯ ಶ್ರೀ ರೇವಣಸಿದ್ಧೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಶ್ರೀ ಆನಂದ ಗುರೂಜಿ ಶ್ರೀ ಸೇವಾಲಾಲ್ ಮಹಾ ಮಠ ಭಜನಾ ಮಂಡಳಿ ಧೂಪದ ಹಳ್ಳಿ ತಾಂಡ, ಕೊಟ್ಟೂರು.ಮತ್ತು ಶ್ರೀ ಹಗಲ ಬಸವೇಶ್ವರ ಭಜನಾ ಮಂಡಳಿ ವೈ.ಕಗ್ಗಲ್ ಇವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ.28ರಂದು ಬೆ. 8 ರಿಂದ ಗಂಗೆ ಪೂಜೆ, ವೀರಗಾಸೆ, ಲಂಬಾಣಿ ನೃತ್ಯ, ಮಹಾ ಮಂಗಳಾರತಿ ನಂತರ ಸಮಿತಿಯವರಿಂದ ಮಹಾ ಪ್ರಸಾದ ವಿನಿಯೋಗ ಇರುತ್ತದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ದಾವಣಗೆರೆ ಜಿಲ್ಲೆಗಳನ್ನೊಳಗೊಂಡಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಸಹ ಅಜ್ಜಯ್ಯನ ಕಳಸಾರೋಹಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸರ್ವ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತ್ರಿಕರಣಪೂರ್ವಕವಾಗಿ ಭಾಗವಹಿಸಿ ಕೃತಾರ್ಥರಾಗುವಂತೆ ಅಜ್ಜಯ್ಯ ಸೇವಾ ಸಮಿತಿಯ ಧರ್ಮಾಧಿಕಾರಿಗಳು ಹಾಗೂ ವಕೀಲರಾದ ಡಿ.ಮಲ್ಲಿಕಾರ್ಜುನ ಅವರು ಕೋರಿದ್ದಾರೆ.