ವಿಜಯನಗರ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಬಿಜೆಪಿ ಮುಖಂಡ ಬಿ.ಆನಂದ್‌ಸಿಂಗ್ ಅವರು ರಾಜೀನಾಮೇ ನೀಡಿರುವ ಘಟನೆ ತಡವಾಗಿ ಬೆಳಕಿದೆ ಬಂದಿದೆ.
ಇನ್ನೂ ಎರಡು ವರ್ಷಗಳ ಕಾಲ ಅಧಿಕಾರಾವಧಿ ಇದ್ದರೂ ಕೂಡ, ರಾಜೀನಾಮೆ ನೀಡಿರುವುದು ಬಿಜೆಪಿ ಆಂತರಿಕ ವಲಯದಲ್ಲಿ ಚರ್ಚೆಗಳಿಗೆ ಕಾರಣವಾಗಿದೆ. ಮೂರು ಬಾರಿ ಬಿಜೆಪಿ ಪಕ್ಷದಿಂದ ಹಾಗೂ ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಆನಂದ್‌ಸಿಂಗ್ ಅವರು, ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದೆ ಸರಿದಿದ್ದರಲ್ಲದೆ, ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದರು.
ಚುನಾವಣೆಯಲ್ಲಿ ಪುತ್ರನ ಸೋಲಿನಿಂದ ರಾಜಕೀಯದ ಮೇಲೆ ನಿರಾಸಕ್ತಿ ಮೂಡಿದೆಯೋ ಏನೋ. ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಳೆದ ತಿಂಗಳು ಅಂದರೆ ಜೂನ್ 27ರಂದೇ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಲೋಕಸಭಾ ಚುನಾವಣೆ ಹೊತ್ತಲ್ಲಿ ರಾಜಿನಾಮೆ ನೀಡಿರುವುದು ಸಂಚಲನ ಮೂಡಿಸಿದೆ.
ಪತ್ರದಲ್ಲಿ ಏನಿದೆ: 01-07-2023ರಿಂದ ಅನ್ವಯವಾಗುವಂತೆ ಅಧ್ಯಕ್ಷರ ಹುದ್ದೆಗೆ ರಾಜಿನಾಮೆ ನೀಡುತ್ತಿರುವ ಬಗ್ಗೆ ಎಂಬ ವಿಷಯದನ್ವಯ, ನನ್ನ ವೈಯಕ್ತಿಕ ಕಾರಣದಿಂದ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಾರಣ ನನ್ನ ರಾಜಿನಾಮೇಯನ್ನು ಜುಲೈ 1 ರಿಂದ ಅನ್ವಯವಾಗುವಂತೆ ಪರಿಗಣಿಸಲು ಕೋರಿದೆ ಎಂದು ನಮೂದಿಸಲಾಗಿದೆ.
ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆಯ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಸಿದ್ದಾರ್ಥ ಸಿಂಗ್‌ರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಆಪ್ತ ವಲಯದಲ್ಲಿ ಕೇಳಿ ಬಂದಿದ್ದವು. ಆದರೆ ಇದೀಗ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೇ ನೀಡಿರುವುದು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿದೆ.