ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ

ಬೆಂಗಳೂರು ; ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆಯಡಿ ಅಕ್ಕಿಯ ಜತೆ ಸಿರಿಧಾನ್ಯ,ಜೋಳ ಮತ್ತು ರಾಗಿಯನ್ನು ಸಮಪ್ರಮಾಣದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿ,ಗೋಧಿ ಇಲ್ಲವೇ ರಾಗಿ ನೀಡುತ್ತಿದ್ದು ಅದೇ ಕಾಲಕ್ಕೆ ಕೋವಿಡ್ ಕಾಲದಲ್ಲಿ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ ಒದಗಿಸುವ ಕೆಲಸವನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಒದಗಿಸುವ ಅಕ್ಕಿ,ಗೋಧಿ ಇಲ್ಲವೇ ರಾಗಿಯ ಜತೆಗೆ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ನೀಡುವ ಅಕ್ಕಿಯ ಲಾಭವೂ ಜನರಿಗಾಗಲಿದ್ದು ಈ ಹಿನ್ನೆಲೆಯಲ್ಲಿ ಅಕ್ಕಿಯ ಜತೆ ರಾಗಿ,ಜೋಳ ಮತ್ತು ಸಿರಿಧಾನ್ಯಗಳನ್ನು ಸಮಪ್ರಮಾನದಲ್ಲಿ ನೀಡುವುದು ಸರ್ಕಾರದ ಯೋಚನೆ. ಹೀಗೆ ಸರ್ಕಾರ ಯೋಚಿಸಲು ಮುಖ್ಯ ಕಾರಣವೆಂದರೆ ತಜ್ಞರ ಸಲಹೆ.ಕೋವಿಡ್ ನಂತರದ ಕಾಲದಲ್ಲಿ ಜನರ ಆರೋಗ್ಯ ಪರಿಸ್ಥಿತಿಯ ಮೇಲೆ ಹೆಚ್ಚಿನ ನಿಗಾ ಇಡುವ ಅಗತ್ಯವಿದ್ದು ಪಡಿತರ ಯೋಜನೆಗಳನ್ನು ಕ್ರಮ ಬದ್ದಗೊಳಿಸಿ ಜನರಿಗೆ ಸಿರಿಧಾನ್ಯ,ಜೋಳವನ್ನು ಒದಗಿಸುವುದು ಒಳ್ಳೆಯದು ಎಂಬುದು ತಜ್ಞರ ವಾದ.ಹಳೆ ಮೈಸೂರು ಭಾಗದಲ್ಲಿ ಅಕ್ಕಿಯ ಜತೆ ರಾಗಿ ಮಾತ್ರವಲ್ಲದೆ ಸಜ್ಜೆ,ನವಣೆ ಸೇರಿದಂತೆ ಸಿರಿಧಾನ್ಯಗಳನ್ನು ನೀಡುವುದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ,ಗೋಧಿಯ ಜತೆ ಜೋಳವನ್ನು ಒದಗಿಸುವುದು ಸೂಕ್ತ ಎಂಬುದು ತಜ್ಞರ ವಾದ. ರಾಜ್ಯ ಸರ್ಕಾರ ಒದಗಿಸುವ ಅಕ್ಕಿ,ಕೇಂದ್ರದ ಆಹಾರ ಭದ್ರತಾ ಯೋಜನೆಯಡಿ ಒದಗಿಸಲಾಗುತ್ತಿರುವ ಅಕ್ಕಿ ಬಹುತೇಕ ಕುಟುಂಬಗಳಿಗೆ ಹೆಚ್ಚಾಗಲಿದ್ದು,ದೊಡ್ಡ ಪ್ರಮಾಣದಲ್ಲಿ ಅಕ್ಕಿ ನೀಡುವ ಬದಲು ರಾಗಿ,ಜೋಳ ಮತ್ತು ಸಿರಿಧಾನ್ಯಗಳನ್ನು ಬಯಸುತ್ತಾರೆ. ಅವರ ಬಯಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಇಂತಹ ಪಡಿತರ ಪದ್ಧತಿಯಲ್ಲಿ ಇಂತಹ ಬದಲಾವಣೆ ಮಾಡಬೇಕು ಎಂದು ತಜ್ಞರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು ಈ ವರದಿಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಅಂದ ಹಾಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ ನೀಡುತ್ತಿರುವ ಕ್ರಮವನ್ನು ಆರು ತಿಂಗಳ ಕಾಲ ಮುಂದುವರಿಸಲು ತೀರ್ಮಾನಿಸಿದ್ದು,ತದ ನಂತರವೂ ಆರು ತಿಂಗಳ ಕಾಲ ಮುಂದುವರಿಸಲು ಬಯಸಿದೆ. ಈ ಮಧ್ಯೆ ದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಆಹಾರ ಧಾನ್ಯಗಳ ಬಂಪರ್ ಉತ್ಪಾದನೆಯಾಗಿದ್ದು ಗೋದಾಮುಗಳಲ್ಲಿ ದಾಸ್ತಾನಿಡಲೂ ಕಷ್ಟಪಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಸಂಗ್ರಹ ಸಾಮರ್ಥ್ಯಕ್ಕೂ ಹೆಚ್ಚಿನ ಆಹಾರ ಧಾನ್ಯಗಳನ್ನು ದೇಶಿಯವಾಗಿ ಜನರಿಗೆ ಒದಗಿಸುವುದು ಸೂಕ್ತ ಮತ್ತು ಇಂತಹ ಕಾಲದಲ್ಲಿ ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮಗಳ ಅಳವಡಿಕೆಯೂ ಸೂಕ್ತ ಎಂದು ತಜ್ಞರು ವರದಿ ನೀಡಿದ್ದಾರೆ. ಆದರೆ ಅಕ್ಕಿಯ ಜತೆಗೆ ರಾಗಿ,ಜೋಳ ಮತ್ತು ಸಿರಿಧಾನ್ಯಗಳನ್ನು ಸಮಪ್ರಮಾಣದಲ್ಲಿ ನೀಡಲು ಮುಂದಾದರೆ ಪ್ರತಿಪಕ್ಷ ಕಾಂಗ್ರೆಸ್ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಆತಂಕ ಖುದ್ದು ಬಸವರಾಜ ಬೊಮ್ಮಾಯಿ ಅವರಿಗಿದೆ. ಅದರಲ್ಲೂ ಮುಖ್ಯವಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು,ನಮ್ಮ ಕಾಲದಲ್ಲಿ ಜನರಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿದ್ದೂ ಅಲ್ಲದೆ,ಈಗ ಒದಗಿಸಲಾಗುತ್ತಿರುವ ಅಕ್ಕಿಯನ್ನೂ ಕಡಿತಗೊಳಿಸಲು ಸರ್ಕಾರ ಹೊರಟಿದೆ ಎಂದು ಅಪಸ್ವರ ಎತ್ತಬಹುದು. ಹೀಗಾಗಿ ಪ್ರತಿಪಕ್ಷ ಕಾಂಗ್ರೆಸ್ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರೆ ನಮಗೆ ವಿನಾ ಕಾರಣ ಕಿರಿಕಿರಿ ಎಂದು ಬಸಬರಾಜ ಬೊಮ್ಮಾಯಿ ಹೇಳಿದ್ದಾರೆನ್ನಲಾಗಿದ್ದು,ಇದರ ನಡುವೆಯೂ ತಜ್ಞರ ವರದಿಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top