ಬಳ್ಳಾರಿ, ಮಾ.27 : :ಯೋಗಿ ನಾರೇಯಣ ಯತೇಂದ್ರರವರ(ಕೈವಾರ ತಾತಯ್ಯನವರ)ಜಯಂತ್ಯುತ್ಸವವನ್ನು ನಗರದ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಭಾನುವಾರ ಆಚರಿಸಲಾಯಿತು. ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚುವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೈವಾರ ತಾತಯ್ಯನವರ ಜಯಂತಿಯನ್ನು ಇದೇ ಮೊದಲ ಬಾರಿಗೆ ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ;ಈ ಮೂಲಕ ಬಲಿಜ ಸಮುದಾಯದ ಬಹುದಿನಗಳ ಬೇಡಿಕೆಗೆ ನಮ್ಮ ಸರಕಾರ ಸ್ಪಂದಿಸಿದೆ ಎಂದರು.
ಕೈವಾರ ತಾತಯ್ಯನವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೇ ಇಡೀ ಮನುಕುಲಕ್ಕೆ ಸೇರಿದವರಾಗಿದ್ದಾರೆ; ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಅವರ ನಡೆ-ನುಡಿ ತತ್ವಾದರ್ಶಗಳು ನೆನಪಿಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಕೆಲಸವಾಗಬೇಕು ಎಂದರು ಮಹನೀಯರ ಜಯಂತಿಗಳು ಕಾಟಾಚಾರಕ್ಕೆ ಆಚರಿಸಿದೇ ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಅವರ ತತ್ವ-ಆದರ್ಶಗಳನ್ನು ಅರಿತುಕೊಳ್ಳುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು;ಅಂದಾಗ ಮಾತ್ರ ಜೀವನ ಸಾರ್ಥಕ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಪಾಲನ್ನ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಎಡಿಸಿ ಪಿ.ಎಸ್.ಮಂಜುನಾಥ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ್ ಸೇರಿದಂತೆ ಬಲಿಜ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.