ಬಳ್ಳಾರಿ,ಜ.೨೪: ಬಳ್ಳಾರಿ ನಗರದಲ್ಲಿ ಅತ್ಯಾಧುನಿಕವಾಗಿ, ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಇಂದು ಕ್ರಿಕೆಟ್ ಸ್ಟೇಡಿಯಂ ಸ್ಥಳ ಪರಿಶೀಲನೆ ನಡೆಸಿದರು. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿಯೇ ಇರುವ ೧೮ ಎಕರೆಗೂ ಹೆಚ್ಚು ಸ್ಥಳವನ್ನು, ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂಗಾಗಿ ತೆಗೆದಿರಿಸಲಾಗಿದ್ದು, ಶಾಸಕ ಸೋಮಶೇಖರರೆಡ್ಡಿಯವರು ಇಂದು ಬೆಳಿಗ್ಗೆ, ಜಿಲ್ಲೆಯ ಅಧಿಕಾರಿಗಳು ಹಾಗೂ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಸದಸ್ಯರೊಂದಿಗೆ, ಕ್ರಿಕೆಟ್ ಪ್ರೇಮಿಗಳೊಂದಿಗೆ ಸ್ಥಳದ ಪರಿಶೀಲನೆ ನಡೆಸಿದರು.
ಈ ಸ್ಟೇಡಿಯಂ ಅನ್ನು ಕೆಎಸ್‌ಸಿಎ ನಿರ್ಮಿಸಲಿದ್ದು, ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಈ ಹಿಂದೆ ಜಿ.ಜನಾರ್ದನರೆಡ್ಡಿಯವರು ಜಿಲ್ಲಾ ಸಚಿವರಾಗಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ನಿರ್ಧಾರ ಕೈಗೊಂಡು ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಆದರೆ ಕೆಲ ಕಾರಣಗಳಿಂದಾಗಿ ಇದು ಕೊಂಚ ಕಾಲ ನೆನೆಗುದಿಗೆ ಬಿದ್ದಿತ್ತಾದರೂ, ಇದೀಗ ಈ ಕನಸು ನನಸಾಗಲಿದೆ. ಶಾಸಕ ಸೋಮಶೇಖರರೆಡ್ಡಿ ಜೊತೆಯಲ್ಲಿ ಕೆಎಸ್‌ಸಿಎ ಸದಸ್ಯ ಶಶಿಧರ್, ಆಲಿಖಾನ್, ಎಪಿಎಂಸಿ ನಿರ್ದೇಶಕ ಕೃಷ್ಣಾರೆಡ್ಡಿ ಹಾಗೂ ಕ್ರೀಡಾ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೆಎಸ್‌ಸಿಎ ವತಿಯಿಂದ ಸುಸಜ್ಜಿತವಾಗಿ ಈ ಕ್ರಿಕೆಟ್ ಸ್ಟೇಡಿಯಂ ಮೈದಳಿಯಲಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದ, ಅಂತರ್‌ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಇಲ್ಲಿ ನಡೆಸಬಹುದಾಗಿದೆ. ರಣಜಿ ಕ್ರಿಕೆಟ್ ಸೇರಿದಂತೆ ಇತರೆ ಕ್ರಿಕೆಟ್ ಮ್ಯಾಚ್‌ಗಳು, ಭಾರತ ಮತ್ತು ಇತರೆ ದೇಶಗಳ ನಡುವಣ ಕ್ರಿಕೆಟ್ ಪಂದ್ಯಾವಳಿಗಳನ್ನೂ ನಡೆಸುವುದರ ಜೊತೆಗೆ ಕೆಪಿಎಲ್, ಐಪಿಎಲ್ ಪಂದ್ಯಾವಳಿಗಳನ್ನು ನಡೆಸಬಹುದಾಗಿದೆ ಎನ್ನಲಾಗುತ್ತಿದೆ.
ಶಾಸಕ ಸೋಮಶೇಖರರೆಡ್ಡಿ ಅವರು ಈ ಬಗ್ಗೆ ‘ಕನ್ನಡನಾಡು’ ಪ್ರತಿನಿಧಿಯೊಂದಿಗೆ ಮಾತನಾಡಿ, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಬೇಡಿಕೆ ಕೈಗೂಡುತ್ತಿರುವುದು ಹೆಚ್ಚಿನ ಖುಷಿ, ಸಂತಸ ಮೂಡಿಸಿದೆ. ನನ್ನ ಸಹೋದರ ಮಾಜಿ ಸಚಿವ ಜಿ.ಜನಾರ್ದನರೆಡ್ಡಿಯವರ ಕನಸು ಇದು. ಇದು ನನಸಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ೫೦ ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.