ಸಚಿವ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ

ಬಳ್ಳಾರಿ, ಜಿ.25 : ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಬಳ್ಳಾರಿ ಜಿಲ್ಲೆಯ ಜನಪ್ರಿಯ ನಾಯಕ, ನೆರೆಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ, ರಾಜ್ಯದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಸಚಿವ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕೆನ್ನುವ ಬಳ್ಳಾರಿಗರ ಬಹುದಿನಗಳ ಬೇಡಿಕೆ, ಕೂಗಿಗೆ ಇದೀಗ ಫಲ ದೊರೆತಿದೆ. ಅಲ್ಲದೇ ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವಂತೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮುಖ್ಯಮಂತ್ರಿಗಳಿಗೆ ಮತ್ತು ಬಿಜೆಪಿ ವರಿಷ್ಠರನ್ನು ಮನವಿ ಮಾಡಿ ಒತ್ತಾಯಿಸಿದ್ದುದು ಈಗ ನೆರವೇರಿದೆ.


೨೦೦೬ರಲ್ಲಿಯೇ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ, ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತಾದರೂ, ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆಗೂ ಕೆಲವೇ ದಿನಗಳ ಮುನ್ನ (ಆ.೧೩ರಂದು) ಶ್ರೀರಾಮುಲು ಅವರನ್ನು ಬಳ್ಳಾರಿ ಉಸ್ತುವಾರಿಕೆಯಿಂದ ಬಿಡುಗಡೆಗೊಳಿಸಿ, ಅಂದಿನ ಉಪಮುಖ್ಯಮಂತ್ರಿಗಳಾಗಿದ್ದ ದಿ||ಎಂ.ಪಿ.ಪ್ರಕಾಶ್ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಅವಕಾಶ ಅಂದು ಸಚಿವ ಬಿ.ಶ್ರೀರಾಮುಲುಗೆ ತಪ್ಪಿಸಲಾಗಿತ್ತು. ಶ್ರೀರಾಮುಲು ಅವರನ್ನು ಅಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದರಿಂದ, ಶ್ರೀರಾಮುಲು ಅವರು ‘ಗದಗ’ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು, ಧ್ವಜಾರೋಹಣ ನೆರವೇರಿಸಿದರಲ್ಲದೇ, ಗದಗ ಜಿಲ್ಲೆಯಲ್ಲಿ ಜನಪ್ರಿಯ ಮುಖಂಡರಾಗಿ ರೂಪುಗೊಂಡಿದ್ದುದೆಲ್ಲವೂ ಈಗ ಇತಿಹಾಸ! ಇದೀಗ ೧೫ ವರ್ಷಗಳ ನಂತರ ಮತ್ತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ಸಚಿವ ಶ್ರೀರಾಮುಲು ಅವರಿಗೆ ದೊರೆತಿದ್ದು, ಈ ಸುವರ್ಣ ಅವಕಾಶದೊಂದಿಗೆ ನಾಡಿದ್ದು, ಜ.೨೬ರ ಗಣರಾಜ್ಯೋತ್ಸವ ದಿನದಂದು ಬಳ್ಳಾರಿಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಹುತೇಕವಾಗಿ ೧೫ ವರ್ಷಗಳ ನಂತರ ಸಚಿವ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ‘ಭಾಗ್ಯದ ಜೊತೆ-ಜೊತೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ‘ಧ್ವಜಾರೋಹಣ’ದ ಕನಸೂ ಸಹ ನನಸಾಗಲಿದೆ ಎನ್ನಬಹುದು.


ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ, ಅವರ ಅಭಿಮಾನಿಗಳ ಬಳಗ, ಬೆಂಬಲಿಗರ ಪಡೆ ತುಂಬಾ ಹುರುಪಿನಲ್ಲಿದ್ದು, ಬಳ್ಳಾರಿ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯಲಿದೆ. ಸಾವಿರಾರು ಕೋಟಿ ರೂ.ಗಳ ಅನುದಾನ ಜಿಲ್ಲೆಗೆ ಹರಿದು ಬರಲಿದೆ ಎನ್ನುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸವಾಲಿನ ಕೆಲಸವೂ ಹೌದು! : ಆಂಧ್ರದ ಗಡಿಗೆ ಅಂಟಿಕೊಂಡಿರುವ ಬಳ್ಳಾರಿ ಜಿಲ್ಲೆಯ ಉಸ್ತುವಾರಿಕೆಯ ಹೊಣೆ ಸುಲಭವಲ್ಲ. ಈ ಹಿಂದೆ ಜನಾರ್ದನರೆಡ್ಡಿಯವರು ಜಿಲ್ಲಾ ಸಚಿವರಾಗಿದ್ದ ಸಂದರ್ಭದಲ್ಲಿ ಚಾಲನೆಗೊಂಡ ಅನೇಕ ಯೋಜನೆಗಳು ಪೂರ್ಣಗೊಂಡಿಲ್ಲ. ಅವೆಲ್ಲವನ್ನೂ ಪೂರ್ಣಗೊಳಿಸುವುದರ ಜೊತೆಗೆ, ಜಿಲ್ಲೆಯ ಸಮಗ್ರ ಪ್ರಗತಿಗೆ ತಮ್ಮ ‘ಛಾಪು’ ಮೂಡಿಸುವಲ್ಲಿ ಶ್ರೀರಾಮುಲು ಶ್ರಮಿಸಬೇಕಾಗಿದೆ. ಕೋವಿಡ್ ನಿಯಂತ್ರಣ, ಡಿಎಂಎಫ್ ನಿಧಿಯ ಸಮರ್ಪಕ ಬಳಕೆ, ‘ಜಿಂದಾಲ್ ಕಾರ್ಖಾನೆಯವರ ನೆರವಿನಿಂದ ವಿವಿಧ ಅಭಿವೃದ್ಧಿ ಯೋಜನೆ ಜಾರಿಗೆ, ಕುಡಿವ ನೀರು ಪೂರೈಕೆ ಮತ್ತು ಏತ ನೀರಾವರಿ ಯೋಜನೆಗಳ ಜಾರಿ, ಬಳ್ಳಾರಿ ಜಿಲ್ಲೆಯನ್ನು ‘ಸ್ಟೀಲ್-ಹಬ್ ಆಗಿ ರೂಪಿಸುವುದು, ಬಳ್ಳಾರಿಯಲ್ಲಿ ಅಪರೆಲ್ ಪಾರ್ಕ್ ನಿರ್ಮಾಣ, ವಿವಿಧೆಡೆ ‘ಫ್ಲೈ ಓವರ್ಗಳ ನಿರ್ಮಾಣ, ಇನ್ನಿತರೆ ಅನೇಕ ಯೋಜನೆಗಳು ಸಾಕಾರಗೊಳ್ಳಲಿ ಎನ್ನುವ ನಿರೀಕ್ಷೆ ಜನ ಸಾಮಾನ್ಯರದ್ದಾಗಿದೆ.


ಸಚಿವ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿಕೆ ವಹಿಸಿಕೊಂಡ ನಂತರ ಭರ್ಜರಿ ಅಭಿವೃಧ್ಧಿ ಆಗಬಹುದು ಎನ್ನುವ ಅವರ ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆಗಳು ಸಾಕಾರಗೊಳ್ಳಲು ಶ್ರೀರಾಮುಲು ಹಗಲಿರುಳೂ ಶ್ರಮಿಸಬೇಕಾಗಿದೆ. ಸಚಿವ ಶ್ರೀರಾಮುಲು ಈ ಹಿಂದೆಂದಿಗಿಂತಲೂ ಈಗ ‘ಪಕ್ವತೆ’ ಬೆಳೆಸಿಕೊಂಡಿದ್ದಾರೆ. ಅನುಭವ, ಹಿರಿತನ ಅವರನ್ನು ಹೆಚ್ಚಿನ ಮಟ್ಟದಲ್ಲಿ ‘ಪಳಗು’ವಂತೆ ಮಾಡಿದೆ. ಸಚಿವ ಶ್ರೀರಾಮುಲು ಅಲ್ಲಲ್ಲ, ಬಳ್ಳಾರಿ ಜಿಲ್ಲಾ ಸಚಿವ ಶ್ರೀರಾಮುಲು ತಮ್ಮ ಜವಾಬ್ದಾರಿ ಹೇಗೆ ನಿರ್ವಹಿಸುತ್ತಾರೋ? ಹೇಗೆ ಎಲ್ಲಾ ಸವಾಲುಗಳನ್ನು ಎದುರಿಸಿ, ಬಳ್ಳಾರಿ ಜಿಲ್ಲೆಯನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment

Your email address will not be published. Required fields are marked *

Translate »
Scroll to Top